ADVERTISEMENT

ದೇವಾಲಯದಲ್ಲಿ ಮೊಬೈಲ್ ಬಳಕೆ ಆರೋಪ: ಪರಿಶಿಷ್ಟ ವಿದ್ಯಾರ್ಥಿ ಮೇಲೆ ಹಲ್ಲೆ

ಆಂಜನೇಯಸ್ವಾಮಿ ದೇವಾಲಯದಲ್ಲಿ ಮೊಬೈಲ್ ಬಳಕೆ ಆರೋಪ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 21:45 IST
Last Updated 31 ಅಕ್ಟೋಬರ್ 2021, 21:45 IST
ಹಲ್ಲೆಗೊಳಗಾದ ವಿದ್ಯಾರ್ಥಿ ದಿಲೀಪ್ ಕುಮಾರ್
ಹಲ್ಲೆಗೊಳಗಾದ ವಿದ್ಯಾರ್ಥಿ ದಿಲೀಪ್ ಕುಮಾರ್   

ವಿಜಯಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ):ದೇವಾಲಯದಲ್ಲಿ ಮೊಬೈಲ್ ಬಳಕೆ ಮಾಡಿದ ಎನ್ನುವ ವಿಚಾರಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಕಾಲೇಜು ವಿದ್ಯಾರ್ಥಿಯ ಮೇಲೆ ಅರ್ಚಕ ಸೇರಿದಂತೆ ದೇವಾಲಯ ಸಮಿತಿಯ ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ದೇವನಹಳ್ಳಿ ಮುಖ್ಯರಸ್ತೆಯ ಮೋರಿ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ನಡೆದಿದೆ.

ದಿಲೀಪ್ ಕುಮಾರ್ ಗಾಯಗೊಂಡ ವಿದ್ಯಾರ್ಥಿ. ಆತನನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ವಿಜಯಪುರ ಠಾಣೆಯಲ್ಲಿ ಏಳು ಮಂದಿ ವಿರುದ್ಧ ದೂರು ದಾಖಲಾಗಿದೆ.

ವಿದ್ಯಾರ್ಥಿಯು ಬೆಳಿಗ್ಗೆ ದೇವರ ದರ್ಶನಕ್ಕೆ ಹೋಗಿದ್ದಾನೆ. ಪ್ರಸಾದ ತೆಗೆದುಕೊಳ್ಳುವಾಗ ಆತನ ಮೊಬೈಲ್ ರಿಂಗ್ ಆಗಿದೆ. ಈ ವೇಳೆ ಅರ್ಚಕರು ದೇವಾಲಯದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ತಿಳಿಸಿದ್ದಾರೆ.

ADVERTISEMENT

ಆತ ಕರೆ ಸ್ವೀಕರಿಸದೇ ಹೊರಗೆ ಹೋಗುತ್ತಿರುವಾಗ ದೇವಾಲಯದ ಆವರಣದಲ್ಲಿ ಪ್ರಕಾಶ್ ಎಂಬುವರಿಗೆ ಮೊಬೈಲ್‌ ಕರೆ ಬಂದಿದ್ದು ಅವರು ಮಾತನಾಡುವುದನ್ನು ನೋಡಿದ್ದಾನೆ. ಈ ಬಗ್ಗೆ ದಿಲೀಪ್ ಕುಮಾರ್ ಅರ್ಚಕರ ಬಳಿ ಪ್ರಶ್ನೆ ಮಾಡಿದ್ದಾನೆ.

‘ಇದರಿಂದ ಕೋಪಗೊಂಡ ದೇವಾಲಯ ಸಮಿತಿಯ ಪ್ರಕಾಶ್ ಸೇರಿದಂತೆ ಇತರೇ ಸದಸ್ಯರು ಪೈಪ್‌ಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ನನ್ನ ಮಗನಿಗೆ ಕಾಲುಗಳಲ್ಲಿ ಒದ್ದು, ಹಲ್ಲೆ ಮಾಡಿದ್ದಾರೆ. ಟವೆಲ್‌ನಿಂದ ಕುತ್ತಿಗೆ ಬಿಗಿದಿದ್ದಾರೆ. ಇದರಿಂದ ಉಸಿರಾಡಲಿಕ್ಕೆ ಸಾಧ್ಯವಾಗದೆ ಅರೆಪ್ರಜ್ಞಾವಸ್ಥೆಗೆ ಜಾರಿದ್ದಾನೆ’ ಎಂದು ವಿದ್ಯಾರ್ಥಿಯ ತಂದೆ ಎ. ನಾರಾಯಣಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ಕೆ.ಎಸ್. ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ನಳಿನಾಕ್ಷಿ ಹಾಗೂ ಹಿರಿಯ ಮೇಲ್ವಿಚಾರಕ ರಂಗಪ್ಪ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.