ADVERTISEMENT

₹20 ಕೋಟಿ ಅಕ್ರಮ: ವಿಚಾರಣೆಗೆ ಸಮಿತಿ

ಬೆಳಗಾವಿ ಅಧಿವೇಶನ ನೆಪದಲ್ಲಿ ಸುಳ್ಳು ಬಿಲ್ ಸೃಷ್ಟಿ : ಪ್ರಜಾವಾಣಿ ವರದಿ ಫಲಶ್ರುತಿ(ಲೋಗೋ)

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 19:04 IST
Last Updated 23 ನವೆಂಬರ್ 2018, 19:04 IST

ಬೆಂಗಳೂರು: ಬೆಳಗಾವಿ ಅಧಿವೇಶನದ ವೇಳೆಯ ಲೆಕ್ಕಕ್ಕೆ ಸಿಗದ ₹20 ಕೋಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್ ಝಾ ನೇತೃತ್ವದಲ್ಲಿ ಐವರು ಅಧಿಕಾರಿಗಳ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.

2016 ಹಾಗೂ 2017ರಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಶೌಚಾಲಯ, ಸೊಳ್ಳೆ ಪರದೆ, ಬಿದಿರಿನ ತಟ್ಟಿ ಸೌಲಭ್ಯ ಒದಗಿಸಲು ಹಾಗೂ ಊಟದ ಹೆಸರಿನಲ್ಲಿ ಸುಳ್ಳು ಬಿಲ್‌ ಸೃಷ್ಟಿಸಿ ಅವ್ಯವಹಾರ ನಡೆಸಲಾಗಿತ್ತು. ಈ ವಿಷಯದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು.

ವಿಧಾನಸಭಾ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅನಿಲ್‌ ಕುಮಾರ್‌ ಝಾ, ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು ವಿಭಾಗದ (ಉತ್ತರ ವಲಯ), ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ವರದಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ಸಮಿತಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ರಾಷ್ಟ್ರಪತಿ, ರಾಜ್ಯಪಾಲ, ಲೋಕಸಭಾ ಸ್ಪೀಕರ್‌, ರಾಜ್ಯಸಭಾ ಸಭಾಪತಿ, ವಿಧಾನಸಭಾ ಅಧ್ಯಕ್ಷ, ವಿಧಾನ ಪರಿಷತ್‌ ಸಭಾಪತಿ ಹುದ್ದೆಗಳು ಸಂವಿಧಾನಾತ್ಮಕ ಹುದ್ದೆಗಳು. ಇವುಗಳ ಯಶಸ್ವಿ ಕಾರ್ಯನಿರ್ವಹಣೆಗೆ ಅಗತ್ಯ ಅನುದಾನ ನೀಡಲಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡರೆ ಹೇಗೆ. ಸಚಿವಾಲಯದ ಮೇಲಿನ ಅವ್ಯವಹಾರದ ಆರೋಪವನ್ನು ಬೆನ್ನಿಗಿಟ್ಟುಕೊಂಡು ನಾನು ಹೇಗೆ ಬೆಳಗಾವಿ ಅಧಿವೇಶನವನ್ನು ನಡೆಸಲಿ. ಜನರ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲಿ’ ಎಂದು ರಮೇಶ್‌ ಕುಮಾರ್‌ ಸಭೆಯಲ್ಲಿ ಭಾವುಕರಾಗಿ ಮಾತನಾಡಿದರು ಎಂದು ಗೊತ್ತಾಗಿದೆ.

‘ಅಧಿವೇಶನದ ವೇಳೆ ಸುಣ್ಣ ಬಣ್ಣವನ್ನು ಲೋಕೋಪಯೋಗಿ ಇಲಾಖೆಯಿಂದ ಹೊಡೆಸಲಾಗಿದೆ. ಇಲಾಖೆಯಿಂದ ದುಬಾರಿ ಖರ್ಚು ಮಾಡಿಲ್ಲ. ನಕಲಿ ಬಿಲ್‌ ಸೃಷ್ಟಿಸಿರುವ ಅನುಮಾನ ಇದೆ’ ಎಂದು ಅಧಿಕಾರಿಯೊಬ್ಬರು ಸಭೆಯಲ್ಲಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಅಧಿವೇಶನಕ್ಕೆ ವಿಶೇಷ ಅಧಿಕಾರಿ

ಬೆಳಗಾವಿ ಅಧಿವೇಶನವನ್ನು ಅಚ್ಚುಕಟ್ಟಾಗಿ, ಕಡಿಮೆ ಖರ್ಚಿನಲ್ಲಿ ನಡೆಸಲು ಐಎಎಸ್‌ ಅಧಿಕಾರಿಯನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಉಜ್ವಲ್‌ ಕುಮಾರ್ ಘೋಷ್‌ ಅವರನ್ನು ನೇಮಿಸಲು ಮುಖ್ಯ ಕಾರ್ಯದರ್ಶಿ ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.

‘ಬೆಳಗಾವಿಯ 2016, 2017ರ ಅಧಿವೇಶನದ ವೇಳೆ ದುಂದುವೆಚ್ಚ ಮಾಡಲಾಗಿದೆ. ಈ ಸಲ ಅಚ್ಚುಕಟ್ಟಾಗಿ, ಪಾರದರ್ಶಕವಾಗಿ ಅಧಿವೇಶನ ನಡೆಸಬೇಕು ಎಂದು ರಮೇಶ್‌ ಕುಮಾರ್‌ ಹೇಳಿದರು. ಅದಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದೂ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.