ADVERTISEMENT

ಹಿಜಾಬ್ ತೀರ್ಪು ವಿರೋಧಿಸಿ ಬಂದ್‌: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 19:59 IST
Last Updated 23 ಮಾರ್ಚ್ 2022, 19:59 IST

ಬೆಂಗಳೂರು: ‘ಹಿಜಾಬ್ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಧಾನಪರಿಷತ್‌ನಲ್ಲಿ ಬಿಜೆಪಿಯ ಡಿ.ಎಸ್. ಅರುಣ್ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಉಡುಪಿಯಲ್ಲಿ ಆರು ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ವಿವಾದ ರಾಜ್ಯದಾದ್ಯಂತ ಹಬ್ಬಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಮಾರ್ಚ್‌ 15ರಂದು ತೀರ್ಪು ನೀಡಿದೆ. ಈ ತೀರ್ಪಿಗೆ ವಿರುದ್ಧವಾಗಿ 17ರಂದು ಕೆಲವು ಮುಸ್ಲಿಂ ಸಂಘಟನೆಗಳು ಬಂದ್ ನಡೆಸಿವೆ. ಬಂದ್‌ನಿಂದ ಜನಜೀವನ ಅಸ್ತವ್ಯಸ್ತವಾಗಿದೆ. ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ’ ಎಂದು ಆಕ್ಷೇಪಿಸಿದರು.

‘ಬಂದ್ ಮಾಡಿದ ಸಂಘಟನೆಗಳ ವಿರುದ್ಧ ಕ್ರಮ ಜರುಗಿಸಬೇಕು. ಸರ್ಕಾರ ಮುಂದಿನ ದಿನಗಳಲ್ಲಿ ಬಂದ್, ಪ್ರತಿಭಟನೆಗಳನ್ನು ನಿಷೇಧಿಸಬೇಕು’ ಎಂದೂ ಒತ್ತಾಯಿಸಿದರು.‌

ADVERTISEMENT

ಆದರೆ, ಹಿಜಾಬ್‌ ವಿಷಯ ಪ್ರಸ್ತಾಪಕ್ಕೆ ಕಾಂಗ್ರೆಸ್ಸಿನ ಪ್ರಕಾಶ್‌ ರಾಠೋಡ್‌ ಮತ್ತು ನಜೀರ್‌ ಅಹ್ಮದ್‌ ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಹಿಜಾಬ್‌ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ವಿಷಯದ ಮೇಲೆ ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ನಜೀರ್‌ ಆಕ್ಷೇಪಿಸಿದರು.

ಗದ್ದಲದ ಮಧ್ಯೆಯೇ, ಸದಸ್ಯರ ಪ್ರಸ್ತಾವಕ್ಕೆ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.