ಬೆಂಗಳೂರು: ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾದ ಸರ್ಕಾರಿ ಪದವಿಪೂರ್ವ ಕಾಲೇಜುಗಳ 812 ಉಪನ್ಯಾಸಕರನ್ನು ವಾರದಲ್ಲಿ ಮೂರು ದಿನ ಬೇರೆ ಕಾಲೇಜುಗಳಿಗೆ ನಿಯೋಜನೆ ಮಾಡಿದ್ದು, ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು, ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ 1,232 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಪ್ರತಿ ಕಾಲೇಜಿಗೂ ವಿಷಯವಾರು ಶಿಕ್ಷಕರ ಹುದ್ದೆ ಮಂಜೂರು ಮಾಡಲು ವಿದ್ಯಾರ್ಥಿಗಳ ಸಂಖ್ಯೆಯನ್ನೇ ಮಾನದಂಡವಾಗಿ ಬಳಸಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆ ಇರುವ ವಿಜ್ಞಾನ ವಿಷಯಗಳಿಗೆ ಗರಿಷ್ಠ 120 ವಿದ್ಯಾರ್ಥಿಗಳು ಹಾಗೂ ಪ್ರಾಯೋಗಿಕ ಪರೀಕ್ಷೆ ಇಲ್ಲದ ಕಲೆ, ವಾಣಿಜ್ಯ ಮತ್ತಿತರ ವಿಷಯಗಳಲ್ಲಿ ಗರಿಷ್ಠ 320 ವಿದ್ಯಾರ್ಥಿಗಳವರೆಗೆ ತಲಾ ಒಬ್ಬರು ವಿಷಯವಾರು ಉಪನ್ಯಾಸಕರನ್ನು ನೇಮಿಸಲು ನಿಯಮವಿದೆ.
ಕೆಲ ವರ್ಷಗಳಿಂದ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಖಾಸಗಿ ಕಾಲೇಜುಗಳ ದಾಖಲಾತಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದರಲ್ಲೂ ಕಲಾ ಮತ್ತು ವಿಜ್ಞಾನ ವಿಷಯದಲ್ಲಿ ಈ ಕೊರತೆಯ ಅಂತರ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಹೀಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ವಿಷಯಗಳ ಉಪನ್ಯಾಸಕರನ್ನು ಜಿಲ್ಲಾ ವ್ಯಾಪ್ತಿಯ ಒಳಗಿನ ಮತ್ತೊಂದು ಕಾಲೇಜಿಗೆ ನಿಯೋಜನೆ ಮಾಡಲಾಗುತ್ತಿದೆ. 2025–26ನೇ ಸಾಲಿನಲ್ಲಿ ಕನ್ನಡ, ಇಂಗ್ಲಿಷ್, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವವಿಜ್ಞಾನ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿಷಯದ ಉಪನ್ಯಾಸಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.
‘ನಿಯಮಕ್ಕಿಂತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪ ಇಟ್ಟುಕೊಂಡು ವಾರದಲ್ಲಿ ಮೂರು ದಿನ ಬೇರೆ ಕಾಲೇಜಿಗೆ ನಿಯೋಜನೆ ಮಾಡಿದ್ದಾರೆ. ನಾವು ಕೆಲಸ ಮಾಡುವ ಮೂಲ ಕಾಲೇಜಿಗೂ ನಿಯೋಜನೆಗೊಂಡ ಕಾಲೇಜಿಗೂ 70 ಕಿ.ಮೀ. ಅಂತರವಿದೆ. ಅನಿವಾರ್ಯವಾಗಿ ಅಷ್ಟು ದೂರ ಪ್ರಯಾಣ ಮಾಡಬೇಕು’ ಎನ್ನುತ್ತಾರೆ ಉಪನ್ಯಾಸಕ ರಾಜಪ್ಪ.
ಅಲ್ಲದೆ, ‘ವಾರದಲ್ಲಿ ಎರಡು ದಿನ ನಿರಂತರ ರಜೆ ಬಂದರೆ ಒಂದೇ ದಿನ ಪಾಠ ಮಾಡಲು ಸಾಧ್ಯ. ಎರಡೂ ಕಡೆ ಪಠ್ಯವನ್ನು ನಿಗದಿತ ಅವಧಿಯ ಒಳಗೆ ಮುಗಿಸುವ ಷರತ್ತು ವಿಧಿಸಲಾಗಿದೆ. ಇದು ಹೇಗೆ ಸಾಧ್ಯ? ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯದ ಈ ನಿರ್ಧಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತಿದೆ’ ಎಂದೂ ಅವರು ಹೇಳಿದರು.
‘ಹಾಸನ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡಿದ್ದೆ. ಭೌತವಿಜ್ಞಾನ ವಿಷಯವೇ ಕಠಿಣವಾಗಿದೆ. ಆದರೆ, ಅಲ್ಲಿದ್ದ ಭೌತವಿಜ್ಞಾನ ಉಪನ್ಯಾಸಕರನ್ನು ವಾರದಲ್ಲಿ ಮೂರು ದಿನ ಬೇರೆ ಕಡೆ ನಿಯೋಜನೆ ಮಾಡಿದ್ದಾರೆ. ಇದರಿಂದ ಕಲಿಕೆಗೆ ತೊಂದರೆಯಾಗಿದೆ. ಖಾಸಗಿ ಕಾಲೇಜಿಗೆ ಸೇರಲು ಮನೆಯ ಆರ್ಥಿಕ ಸ್ಥಿತಿ ಸರಿ ಇಲ್ಲ’ ಎಂದು ನೋವು ತೋಡಿಕೊಂಡರು ವಿದ್ಯಾರ್ಥಿನಿ ಆಶಾ.
1,229
ಸರ್ಕಾರಿ ಪಿಯು ಕಾಲೇಜುಗಳು
12,917
ಮಂಜೂರಾದ ಬೋಧಕ ಹುದ್ದೆಗಳು
8,156
ಕಾಯಂ ಉಪನ್ಯಾಸಕರು
4,761
ಖಾಲಿ ಹುದ್ದೆಗಳು
812
ವಾರದಲ್ಲಿ ಮೂರು ದಿನ ನಿಯೋಜನೆಗೊಂಡವರು
ಸರ್ಕಾರವು ನಿಯಮಗಳಿಗೆ ತಿದ್ದುಪಡಿ ತಂದು ವಿದ್ಯಾರ್ಥಿ–ಉಪನ್ಯಾಸಕರ ಅನುಪಾತ ಮರು ನಿಗದಿ ಮಾಡಬೇಕು. ಪಿಯು ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕುಎ.ಎಚ್. ನಿಂಗೇಗೌಡ,ಅಧ್ಯಕ್ಷ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.