ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕ ‘ಒಎಂಆರ್’ ತಿದ್ದಿ ಅಕ್ರಮ ?

ಇಬ್ಬರು ಅಭ್ಯರ್ಥಿಗಳ ಮೇಲೆ ಅನುಮಾನ: ಸಿಸಿಬಿ ಪತ್ರ

​ಪ್ರಜಾವಾಣಿ ವಾರ್ತೆ
Published 19 ಮೇ 2022, 19:45 IST
Last Updated 19 ಮೇ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ‘ಒಎಂಆರ್’ ತಿದ್ದಿ ಅಕ್ರಮ ಎಸಗಿರುವ ಸಂಶಯ ವ್ಯಕ್ತವಾಗಿದ್ದು, ಈ ಬಗ್ಗೆ ಕೆಲವು ಮಾಹಿತಿ ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.

ಇಬ್ಬರ ಮೇಲೆ ಅನುಮಾನ: ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಬರೆದಿದ್ದ ಇಬ್ಬರು ಅಭ್ಯರ್ಥಿಗಳ ಒಎಂಆರ್ ಪ್ರತಿಯಲ್ಲಿ ವ್ಯತ್ಯಾಸ ಇರುವ ಮಾಹಿತಿ ಇದೆ. ಆ ಅಭ್ಯರ್ಥಿಗಳ ಒಎಂಆರ್‌ ಪ್ರತಿಗಳನ್ನು ನೀಡುವಂತೆ ಕೆಇಎ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭ್ಯರ್ಥಿಗಳ ಕಾರ್ಬನ್ ಪ್ರತಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಕೆಇಎ ಕಡೆಯಿಂದ ಅಸಲಿ ಪ್ರತಿಗಳು ಸಿಕ್ಕ ಬಳಿಕ ಪರಸ್ಪರ ಹೋಲಿಕೆ ಮಾಡಲಾಗುವುದು. ಮೇಲ್ನೋಟಕ್ಕೆ ವ್ಯತ್ಯಾಸಗಳು ಕಂಡುಬಂದರೆ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಲಾಗುವುದು. ನಂತರವೇ ಅಭ್ಯರ್ಥಿಗಳು ಹಾಗೂ ಅವರಿಗೆ ಸಹಕಾರನೀಡಿದವರ ವಿರುದ್ಧ ಕಾನೂನು ಕ್ರಮಜರುಗಿಸಲಾಗುವುದು’ ಎಂದೂ ಹೇಳಿದರು.

ADVERTISEMENT

ಒಎಂಆರ್ ತಿದ್ದಿರುವ ಶಂಕೆ: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ತಿದ್ದಿ ಅಕ್ರಮ ಎಸಗಿದ್ದ ಸಂಗತಿಯನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಬಯಲುಮಾಡಿದ್ದಾರೆ. ಅದೇ ಮಾದರಿಯಲ್ಲೇ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಒಎಂಆರ್ ತಿದ್ದಿರುವ ಬಗ್ಗೆ ಸಿಸಿಬಿಪೊಲೀಸರಿಗೆ ಸಂದೇಹ ಉಂಟಾಗಿದೆ.

‘ಪರೀಕ್ಷೆ ಕೊಠಡಿಯಲ್ಲಿ ಕೆಲ ಪ್ರಶ್ನೆಗಳಿಗೆ ಮಾತ್ರ ಉತ್ತರ ಬರೆದು, ಇನ್ನುಳಿದ ವೃತ್ತಗಳನ್ನು ಅಭ್ಯರ್ಥಿಗಳು ಖಾಲಿ ಬಿಟ್ಟಿರುವ ಅನುಮಾನವಿದೆ. ಖಾಲಿ ವೃತ್ತಗಳನ್ನು ಭರ್ತಿ ಮಾಡಿ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲು ಸಂಚು ರೂಪಿಸಿರುವ ಶಂಕೆಯೂ ಇದೆ' ಎಂದೂ ಅಧಿಕಾರಿಯೊಬ್ಬರು ತಿಳಿಸಿದರು.

‘ಬಂಧಿತ ಆರೋಪಿಗಳಾದ ನಾಗರಾಜ್ ಹಾಗೂ ಸೌಮ್ಯಾ, ಪ್ರಶ್ನೆಗಳ ಸೋರಿಕೆ ಬಗ್ಗೆ ಮಾತ್ರ ಮಾಹಿತಿ ನೀಡುತ್ತಿದ್ದಾರೆ. ಆದರೆ, ಬೇರೆ ಪ್ರಕಾರದಲ್ಲೂ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೀಗಾಗಿ, ಎಲ್ಲ ಆಯಾಮದಲ್ಲಿ ತನಿಖೆ ಮುಂದುವರಿದಿದೆ’ ಎಂದೂ ಹೇಳಿದರು.

ಮಾರ್ಚ್‌ 14ರಂದು ನಡೆದಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯ 18 ಪ್ರಶ್ನೆಗಳು, ಪರೀಕ್ಷೆಗೂ ಮುನ್ನ ಸೋರಿಕೆಯಾದ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಅವರು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಅಭ್ಯರ್ಥಿಯೂ ಆಗಿದ್ದ ಅತಿಥಿ ಉಪನ್ಯಾಸಕಿ ಆರ್. ಸೌಮ್ಯಾ ಹಾಗೂ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ (ಮೌಲ್ಯಮಾಪನ) ಪ್ರೊ. ಎಚ್‌. ನಾಗರಾಜ್ ಅವರನ್ನು ಬಂಧಿಸಿದ್ದರು.

ಪ್ರಶ್ನೆಗಳ ಸೋರಿಕೆ ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ತನಿಖೆಯಿಂದ ಲಭ್ಯವಾಗಿತ್ತು. ಹೆಚ್ಚಿನ ತನಿಖೆ ಅಗತ್ಯವಿರುವುದರಿಂದ ಪ್ರಕರಣವನ್ನು ಇತ್ತೀಚೆಗೆಸಿಸಿಬಿಗೆ ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.