ADVERTISEMENT

ಹಾಜರಿ ಕಡ್ಡಾಯ, ಸಂಘರ್ಷ ಬೇಡ: ಸಚಿವರಿಗೆ ಮುಖ್ಯಮಂತ್ರಿ ಬಿಎಸ್‌ವೈ ತಾಕೀತು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:30 IST
Last Updated 15 ಮಾರ್ಚ್ 2021, 19:30 IST
ವಿಧಾನಸಭೆ ಕಲಾಪ–ಸಾಂದರ್ಭಿಕ ಚಿತ್ರ
ವಿಧಾನಸಭೆ ಕಲಾಪ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಜೆಟ್‌ ಅಧಿವೇಶನ ಮುಗಿಯುವವರೆಗೆ ಎಲ್ಲ ಸಚಿವರೂ ಕಡ್ಡಾಯವಾಗಿ ವಿಧಾನಮಂಡಲ ಕಲಾಪದಲ್ಲಿ ಹಾಜರಿರಬೇಕು. ಕಲಾಪಕ್ಕೆ ತೊಡಕಾಗುವುದನ್ನು ತಪ್ಪಿಸಲು ಯಾವುದೇ ಸಂದರ್ಭದಲ್ಲೂ ಪ್ರತಿಪಕ್ಷಗಳ ಸದಸ್ಯರ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಂಪುಟ ಸದಸ್ಯರಿಗೆ ತಾಕೀತು ಮಾಡಿದ್ದಾರೆ.

ಸೋಮವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಸಚಿವರೊಂದಿಗೆ ಅನೌಪಚಾರಿಕ ಸಭೆ ನಡೆಸಿದ ಅವರು, ಕಲಾಪ ನಡೆಯುವ ದಿನಗಳಲ್ಲಿ ಇತರ ಕಾರ್ಯಕ್ರಮಗಳಲ್ಲಿ ಯಾವುದೇ ಸಚಿವರು ಭಾಗಿಯಾಗಬಾರದು ಎಂಬ ನಿರ್ದೇಶನ ನೀಡಿದರು.

‘ಕೆಲವು ದಿನಗಳಿಂದ ಸಚಿವರ ಗೈರಿನ ವಿಚಾರವೇ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ದೊಡ್ಡದಾಗುತ್ತಿದೆ. ಸರ್ಕಾರಕ್ಕೆ ಮುಜುಗರ ಆಗುವುದನ್ನು ತಪ್ಪಿಸಲು ಎಲ್ಲರೂ ಕಲಾಪದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ವಿರೋಧ ಪಕ್ಷಗಳ ಸದಸ್ಯರು ಟೀಕಿಸಿದಾಗ ಆಕ್ರೋಶಗೊಂಡು ಸಂಘರ್ಷಕ್ಕೆ ಇಳಿಯಬೇಡಿ. ಆಯಾ ಸಚಿವರೇ ತಮ್ಮ ಖಾತೆಗೆ ಸಂಬಂಧಿಸಿದ ಉತ್ತರಗಳನ್ನು ನೀಡಿ, ವಿರೋಧ ಪಕ್ಷಗಳ ಸದಸ್ಯರ ಬಾಯಿ ಮುಚ್ಚಿಸಿ’ ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಸಿ.ಡಿ ವಿಚಾರದಲ್ಲಿ ಪ್ರತಿಬಂಧಕಾಜ್ಞೆ ತಂದಿರುವ ಸಚಿವರಿಗೆ ಪ್ರಶ್ನೆ ಕೇಳದಿರುವ ಕಾಂಗ್ರೆಸ್‌ ನಿಲುವಿನಿಂದ ಇರಿಸು–ಮುರಿಸು ಉಂಟಾಗಬಹುದು. ಅದನ್ನೂ ಶಾಂತವಾಗಿಯೇ ಎದುರಿಸಬೇಕು. ಬಿಜೆಪಿ ಸದಸ್ಯರಿಂದ ಉಪ ಪ್ರಶ್ನೆಗಳನ್ನು ಕೇಳಿಸುವ ಮೂಲಕ ಅದೇ ಸಚಿವರಿಂದ ಸದನದಲ್ಲಿ ಉತ್ತರ ದಾಖಲಾಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ಕೆಲವು ಸಚಿವರು ನೀಡಿದ್ದು, ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಗೊತ್ತಾಗಿದೆ.

ಚುನಾವಣಾ ತಯಾರಿಗೆ ಸೂಚನೆ: ‘ಮಸ್ಕಿ, ಬಸವಕಲ್ಯಾಣ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಳು ಶೀಘ್ರದಲ್ಲಿ ಘೋಷಣೆಯಾಗಲಿವೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ದೃಷ್ಟಿಯಿಂದ ಈ ಉಪ ಚುನಾವಣೆಗಳು ಬಿಜೆಪಿಗೆ ಮಹತ್ವದ್ದಾಗಿವೆ. ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಈಗಿನಿಂದಲೇ ತಯಾರಿ ಆರಂಭಿಸಬೇಕು’ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಜಗದೀಶ ಶೆಟ್ಟರ್, ಆರ್‌. ಅಶೋಕ, ಕೆ.ಎಸ್‌. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್‌, ಸಿ.ಸಿ. ಪಾಟೀಲ, ವಿ. ಸೋಮಣ್ಣ, ಎಸ್‌. ಸುರೇಶ್‌ ಕುಮಾರ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಎಸ್‌.ಟಿ. ಸೋಮಶೇಖರ್‌, ಆರ್‌. ಶಂಕರ್‌, ಸಿ.ಪಿ. ಯೋಗೇಶ್ವರ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.