ADVERTISEMENT

ಆಡಿಯೊ ತನಿಖೆಗೆ ಎಸ್‌ಐಟಿ: ಹಗ್ಗ ಜಗ್ಗಾಟ

ಪಟ್ಟು ಸಡಿಲಿಸದ ಆಡಳಿತ–ವಿರೋಧ ಪಕ್ಷದ ನಾಯಕರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:30 IST
Last Updated 12 ಫೆಬ್ರುವರಿ 2019, 20:30 IST
ಮಂಗಳವಾರ ನಡೆದ ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಶಾಸಕರುಗಳಾದ ಆರ್‌.ಆಶೋಕ್, ಕೆ.ಎಸ್. ಈಶ್ವರಪ್ಪ, ಕೆ.ಜಿ. ಬೋಪಯ್ಯ ಹಾಗೂ ಬಿ. ಶ್ರೀರಾಮುಲು ಇದ್ದಾರೆ -ಪ್ರಜಾವಾಣಿ ಚಿತ್ರ
ಮಂಗಳವಾರ ನಡೆದ ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ಸದಸ್ಯರು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಶಾಸಕರುಗಳಾದ ಆರ್‌.ಆಶೋಕ್, ಕೆ.ಎಸ್. ಈಶ್ವರಪ್ಪ, ಕೆ.ಜಿ. ಬೋಪಯ್ಯ ಹಾಗೂ ಬಿ. ಶ್ರೀರಾಮುಲು ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲದ ಕಿಚ್ಚು ಹಚ್ಚಿರುವ ‘ಆಪರೇಷನ್‌ ಕಮಲದ ಆಡಿಯೊ’ದ ಬಗ್ಗೆ ಯಾವ ಸ್ವರೂಪದ ತನಿಖೆ ನಡೆಸಬೇಕು ಎಂಬುದು ಆಡಳಿತ ಹಾಗೂ ವಿರೋಧ ಪಕ್ಷದ ಮಧ್ಯೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.

ಎಸ್ಐಟಿ ತನಿಖೆ ನಡೆಸಬೇಕು ಎಂಬುದು ನನ್ನ ಸಲಹೆ ಎಂದು ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಮಾತಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಸಮ್ಮತಿಸಿದ್ದರು. ಯಾವುದೇ ಕಾರಣಕ್ಕೂ ಎಸ್ಐಟಿ ಬೇಡ ಎಂದು ಬಿಜೆಪಿ ನಾಯಕರು ಹಕ್ಕೊತ್ತಾಯ ಮಂಡಿಸಿದರು. ಮಂಗಳವಾರ ಇಡೀ ದಿನ ನಡೆದ ವಿಧಾನಸಭಾ ಕಲಾಪ ಈ ವಿಷಯದ ಸುತ್ತಲೇ ಗಿರಕಿ ಹೊಡೆಯಿತು. ಉಭಯತರರು ಹಿಡಿದ ಪಟ್ಟುಬಿಡದೇ ಇದ್ದುದರಿಂದ ಚರ್ಚೆಗೆ ಸೀಮಿತವಾದ ಸದನ, ಯಾವುದೇ ನಿರ್ಣಯಕ್ಕೆ ಬಾರದೇ ಕೊನೆಗೊಂಡಿತು.

ಬೆಳಿಗ್ಗೆ ಕಲಾಪ ಆರಂಭವಾದಾಗ ಆಡಿಯೊ ಪ್ರಕರಣದ ಜತೆಗೆ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ವಿಜುಗೌಡ ಪಾಟೀಲ ಎಂಬುವವರಿಂದ ಹಣ ಕೇಳಿದ್ದಾರೆ ಎನ್ನಲಾದ ವಿಡಿಯೊ ಪ್ರಕರಣವನ್ನು ಬಿಜೆಪಿ ಶಾಸಕರು ಪ್ರಸ್ತಾಪಿಸಿದರು. ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ, ‘ಅದು ನನ್ನ ಮನೆಯೊಳಗೆ ನಡೆದ ಘಟನೆ. ಅದಕ್ಕೆ ಆವಾಗಲೇ ಉತ್ತರ ಕೊಟ್ಟಿದ್ದೇನೆ. ಈಗಲೂ ಪಲಾಯನ ಮಾಡುವುದಿಲ್ಲ. ನಿಮ್ಮದೇ ಪಕ್ಷ ಕೇಂದ್ರದಲ್ಲಿದ್ದು, ಯಾವ ತನಿಖೆ ಬೇಕಾದರೂ ನಡೆಸಿ’ ಎಂದು ಸವಾಲು ಹಾಕಿದರು.

ADVERTISEMENT

ಶಾಸಕರ ಖರೀದಿ, 2008ರಿಂದ ಈವರೆಗೆ ನಡೆದ ರಾಜಕೀಯ ‘ಆಪರೇಷನ್‌’ಗಳ ಬಗ್ಗೆ ಸದನದಲ್ಲಿ ಸವಿಸ್ತಾರವಾಗಿ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಪರಸ್ಪರ ಪಂಥಾಹ್ವಾನ ಕೊಟ್ಟುಕೊಂಡರು.

‘ಎಸ್‌ಐಟಿ ಬಗ್ಗೆ ನಮಗೆ ನಂಬಿಕೆಯಿಲ್ಲ. ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಸುವ ಮೊದಲು ವಿರೋಧ ಪಕ್ಷದವರ ಜತೆ ಸಮಾಲೋಚಿಸಿ ತೀರ್ಮಾನಿಸಿದ್ದರೆ ಇಷ್ಟೆಲ್ಲ ಗದ್ದಲಕ್ಕೆ ಅವಕಾಶ ಆಗುತ್ತಿರಲಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.ಅದಕ್ಕೆ ಸಮ್ಮತಿಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ಸಭೆ ಕರೆಯುವುದಾಗಿ ಪ್ರಕಟಿಸಿದರು.

ಬಿಜೆಪಿ ತಕರಾರುಗಳೇನು?

* ಇಡೀ ಪ್ರಕರಣ ರಾಜಕೀಯ ಷಡ್ಯಂತ್ರ. ಇದರಲ್ಲಿ ಮುಖ್ಯಮಂತ್ರಿಯೇ ಮೊದಲ ಆರೋಪಿ

* 35ರಿಂದ 40 ನಿಮಿಷದ ಆಡಿಯೊ ಎರಡೂವರೆ ನಿಮಿಷಕ್ಕೆ ಇಳಿಸಿ, ತಿರುಚಿ ಬಿಡುಗಡೆ ಮಾಡಲಾಗಿದೆ

* ಎಸ್‌ಐಟಿ ಮುಖ್ಯಮಂತ್ರಿ ಕೈ ಕೆಳಗೆ ಬರುತ್ತದೆ. ಸರ್ಕಾರದ ಮೇಲೆ ವಿಶ್ವಾಸ ಇಲ್ಲ

* ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಸೈಬರ್‌ ಕಾಯ್ದೆ ಪ್ರಕಾರ ದಂಡನಾರ್ಹ

* ಈ ಪ್ರಕರಣದಲ್ಲಿ ಆಡಿಯೋ ಕದ್ದಾಲಿಕೆ ನಡೆದಿದೆ

* ಎಸ್‌ಐಟಿ ತನಿಖೆಗೆ ಕೊಡುವ ಅಧಿಕಾರ ಸಭಾಧ್ಯಕ್ಷರಿಗೆ ಇಲ್ಲ

* ಸಭಾಧ್ಯಕ್ಷರ ಪ್ರಾಮಾಣಿಕತೆ ಬಗ್ಗೆ ಸಂದೇಹವಿಲ್ಲ. ಆದರೆ, ಸತ್ಯಾಸತ್ಯತೆ ಗೊತ್ತಾಗಬೇಕು

* ಇನ್ನೂ ದೂರು ದಾಖಲಾಗದೇ ಇರುವಾಗ ಎಸ್‌ಐಟಿ ಹೇಗೆ ರಚಿಸುತ್ತೀರಿ?

* ಎಸ್‌ಐಟಿಗೆ ಮುಖ್ಯಮಂತ್ರಿ, ಸಭಾಧ್ಯಕ್ಷರ ವಿಚಾರಣೆ ಸಾಧ್ಯ ಇಲ್ಲ


ಮೈತ್ರಿ ಸರ್ಕಾರದ ಸಮರ್ಥನೆಗಳೇನು?

* ಇದೊಂದು ದೊಡ್ಡ ಅಪರಾಧ ಪ್ರಕರಣ. ಅಪರಾಧ ಮಾಡಿದವರಿಗೆ ಶಿಕ್ಷೆ ಆಗಲೇಬೇಕು

* ಎಸ್‌ಐಟಿ ತನಿಖೆ ನಡೆಸಿದರೆ ಪ್ರಕರಣ ಸತ್ಯಾಸತ್ಯತೆಯನ್ನು 15 ದಿನಗಳ ಒಳಗೆ ಹೊರತರಲು ಸಾಧ್ಯ

* ಎಸ್‌ಐಟಿ ವರದಿಯೇ ಅಂತಿಮವಲ್ಲ, ಈ ಬಗ್ಗೆ ಅಂತಿಮ ತೀರ್ಪು ನೀಡಲು ನ್ಯಾಯಾಲಯ ಇದೆ

* ಸತ್ಯ ತಿರುಚಲು, ಮುಚ್ಚಿಡಲು ಸಾಧ್ಯ ಇಲ್ಲ

* ಆರೇಳು ತಿಂಗಳುಗಳಿಂದ ಏನೇನು ನಡೆಯುತ್ತಿದೆ ಎನ್ನುವುದು ಎಸ್‌ಐಟಿಯಿಂದ ಮಾತ್ರ ಹೊರಬರಲು ಸಾಧ್ಯ

* ಈ ಪ್ರಕರಣದಿಂದ ಜನ ನಮ್ಮನ್ನು ಸಂಶಯದಿಂದ ನೋಡುತ್ತಿದ್ದಾರೆ

* ಧ್ಚನಿಸುರುಳಿ ಆಲಿಸಿದರೆ ಈ ಪ್ರಕರಣ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಮತ್ತು ಭಾರತೀಯ ತಂಡ ಸಂಹಿತೆಯಡಿ (ಐಪಿಪಿ) ಅಡಿ ಬರುತ್ತದೆ. ಹೀಗಾಗಿ ಎಸ್‌ಐಟಿಯಿಂದಲೇ ತನಿಖೆ ಅಗತ್ಯ

*ಸದನ ಸಮಿತಿ, ಹಕ್ಕುಚ್ಯುತಿ ಸಮಿತಿ, ನ್ಯಾಯಾಂಗ ವಿಚಾರಣೆಗೆ ಸೀಮಿತ ವ್ಯಾಪ್ತಿ ಇದೆ

ಸದನ ನಾಯಕರ ಸಭೆ ಇಂದು

ಯಾವ ಸ್ವರೂಪದ ತನಿಖೆ ನಡೆಸಬೇಕು ಎಂಬ ಬಗ್ಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಸಭೆ ಬುಧವಾರ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದೆ. ‘ನಮ್ಮಿಂದ ತಪ್ಪಾಗಿದೆ. ದಯವಿಟ್ಟು ಬಿಟ್ಟುಬಿಡಿ’ ಎಂಬ ಧಾಟಿಯಲ್ಲಿ ಮಾತನಾಡಿರುವ ಬಿಜೆಪಿ ನಾಯಕರು, ಸದನ ಸಮಿತಿಯಿಂದಲೇ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಪ್ರತಿಪಾದಿಸಲಿದ್ದಾರೆ. ಕಳೆದ ಏಳೆಂಟು ತಿಂಗಳಿಂದ ‘ಆಪರೇಷನ್‌ ಕಮಲ’ದ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿರುವ ಬಿಜೆಪಿಯ ಜುಟ್ಟು ಆಡಳಿತ ಪಕ್ಷದ ಕೈಗೆ ಸಿಕ್ಕಿದೆ. ಈ ಅಸ್ತ್ರವನ್ನು ಮೈತ್ರಿ ನಾಯಕರು ಸುಲಭದಲ್ಲಿ ಬಿಟ್ಟುಕೊಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

* ಬಿಜೆಪಿಯವರು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಅಥವಾ ತಪ್ಪು ಮಾಡಿದ್ದರೆ ತನಿಖೆಗೆ ನಾನೂ ತಲೆ ಬಾಗುತ್ತೇನೆ

- ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಮುಖ್ಯಮಂತ್ರಿ ಕುಮಾರಸ್ವಾಮಿ ನಕಲಿ, ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ. ಆ ಮೂಲಕ, ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. 40 ನಿಮಿಷದ ಆಡಿಯೊವನ್ನು ಕಟ್ ಆ್ಯಂಡ್ ಪೇಸ್ಟ್ ಮಾಡಿ ತಿರುಚಿದ್ದಾರೆ.

- ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* ನ್ಯಾಯಾಂಗ ಅಥವಾ ಸದನ ಸಮಿತಿ ಎಂಬುದು ಸತ್ಯ ಶೋಧನೆಗೆ ಸೀಮಿತವಾಗುತ್ತದೆ. ಹಾಗಾಗಿ ಅದನ್ನು ಒಪ್ಪಲಾರೆ. ಎಸ್‌ಐಟಿ ತನಿಖೆ ಆಗಲೇಬೇಕು

- ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

* ನಮ್ಮಿಂದ ಏನೋ ತಪ್ಪು ಆಗಿಬಿಟ್ಟಿದೆ. ಅದನ್ನೇ ದೊಡ್ಡದು ಮಾಡಿ ಯಾರನ್ನೋ ಬಲಿ ಹಾಕಬೇಡಿ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡಿ

- ಜೆ.ಸಿ. ಮಾಧುಸ್ವಾಮಿ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.