ADVERTISEMENT

ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ?

ಆಪ್ತರ ಜೊತೆ ಮಾತನಾಡಿದ ದೂರವಾಣಿ ಸಂಭಾಷಣೆಯ ಕ್ಲಿಪ್ಪಿಂಗ್‌ ಬಹಿರಂಗ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 14:24 IST
Last Updated 23 ಡಿಸೆಂಬರ್ 2018, 14:24 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ    

ಬೆಳಗಾವಿ: ಸಚಿವ ಸ್ಥಾನ ಕಿತ್ತುಕೊಂಡಿದ್ದರಿಂದ ಅಸಮಾಧಾನಗೊಂಡಿರುವ ರಮೇಶ ಜಾರಕಿಹೊಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾದ ದೂರವಾಣಿ ಸಂಭಾಷಣೆಯ ಕ್ಲಿಪ್ಪಿಂಗ್‌ ಭಾನುವಾರ ಬಹಿರಂಗಗೊಂಡಿದೆ.

ದೂರವಾಣಿ ಕರೆ ಮಾಡಿದ ಆಪ್ತರೊಬ್ಬರು, ‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದೀರಾ?’ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ, ‘ಹೌದು, ರಾಜೀನಾಮೆ ನೀಡುತ್ತೇನೆ. ಇನ್ನೂ ದಿನಾಂಕ ನಿರ್ಧಾರವಾಗಿಲ್ಲ. ಈ ವಾರದಲ್ಲಿಯೇ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಈ ಸಂಭಾಷಣೆಯ ತುಣುಕು ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಪ್ರತಿಕ್ರಿಯೆ ಪಡೆಯಲು ಮಾಡಲಾದ ದೂರವಾಣಿ ಕರೆಗಳನ್ನು ರಮೇಶ ಸ್ವೀಕರಿಸಲಿಲ್ಲ.

ADVERTISEMENT

ಮುನಿಸಿಕೊಂಡಿಲ್ಲ– ಸಿದ್ದರಾಮಯ್ಯ:ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಚಿವ ಸಂಪುಟದಿಂದ ಕೈ ಬಿಟ್ಟಿದ್ದರಿಂದ ಯಾರೂ ಮುನಿಸಿಕೊಂಡಿಲ್ಲ. ರಮೇಶ ಜಾರಕಿಹೊಳಿ ಕೂಡ ಮುನಿಸಿಕೊಂಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ರಮೇಶ ಇದುವರೆಗೆ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಸಿಕ್ಕ ನಂತರ ಮಾತನಾಡುತ್ತೇನೆ. ಅವರಿಗೆ ಸಚಿವರಾಗಲು ಬಹಳ ಆಸೆ ಇತ್ತು. ಆದರೆ, ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ’ ಎಂದು ಹೇಳಿದರು.

ಎಲ್ಲರಿಗೂ ನೀಡಲಾಗದು:‘ಸಚಿವ ಸ್ಥಾನ ಸೀಮಿತವಾಗಿದ್ದು, ಎಲ್ಲ ಶಾಸಕರಿಗೂ ನೀಡಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಶಾಸಕ ಬಿ.ಸಿ. ಪಾಟೀಲ ಸಂಪರ್ಕದಲ್ಲಿದ್ದಾರೆ. ನಮ್ಮ ಜೊತೆಯೇ ಇದ್ದಾರೆ. ರಮೇಶ ಜೊತೆ ಇನ್ನೂ ಮಾತನಾಡಿಲ್ಲ. ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.