ADVERTISEMENT

ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 22:17 IST
Last Updated 18 ಮಾರ್ಚ್ 2021, 22:17 IST
ಕೋತಿಗಳು–ಸಾಂದರ್ಭಿಕ ಚಿತ್ರ
ಕೋತಿಗಳು–ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಲೆನಾಡಿನಲ್ಲಿ ಮಂಗಗಳ ಹಾವಳಿ ತಡೆಗಟ್ಟಲು ಗಂಡು ಮಂಗಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ನಡೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಆರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಈ ಉತ್ತರ ನೀಡಿದರು. ಹಿಮಾಚಲಪ್ರದೇಶದಲ್ಲಿ ಇಂತಹ ಪ್ರಯೋಗ ಮಾಡಿ ಯಶಸ್ಸು ಸಾಧಿಸಲಾಗಿದೆ ಎಂದೂ ಸಚಿವರು ಹೇಳಿದರು.

ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಪಶು ವೈದ್ಯಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಸೆರೆ ಹಿಡಿದ ಮಂಗಗಳನ್ನು ಪಶು ವೈದ್ಯಕೀಯ ಕಾಲೇಜಿಗೆ ಕೊಂಡೊಯ್ದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಚಿಕಿತ್ಸೆಯ ನಂತರ ಅವುಗಳಿಗೆ ಆಹಾರ ಹಾಗೂ ಔಷಧೋಪಚಾರ ಮಾಡಿ 2–3 ದಿನಗಳ ಕಾಲ ಸೂಕ್ತ ನಿಗಾದಲ್ಲಿಡಲಾಗುತ್ತದೆ. ಗುಣ
ಮುಖವಾದ ಬಳಿಕ ಮರಳಿ ಕಾಡಿಗೆ ಬಿಡಲಾಗುತ್ತದೆ. ಆರಂಭಿಕ ಹಂತದಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಈ ಕಾರ್ಯ
ಮಾಡಲಾಗುತ್ತದೆ ಎಂದು ಹೇಳಿದರು.

ADVERTISEMENT

’₹6 ಕೋಟಿ ವೆಚ್ಚದಲ್ಲಿ ಮಂಕಿ ಪಾರ್ಕ್‌ ಸ್ಥಾಪಿಸುವುದಾಗಿ ಒಂದೂವರೆ ವರ್ಷದ ಹಿಂದೆ ಸರ್ಕಾರ ಪ್ರಕಟಿಸಿತ್ತು. ಈಗ ಆ ಯೋಜನೆ ಅಪೂರ್ಣವಾಗಿದೆ. ಇದೀಗ ಸಾಗರದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಬಜೆಟ್‌ನಲ್ಲಿ ₹25 ಲಕ್ಷ ಮೀಸಲಿಡಲಾಗಿದೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಗಂಡು ಮಂಗಗಳಿಗೆ ಮಾಡುತ್ತೀರಾ ಅಥವಾ ಹೆಣ್ಣು ಮಂಗ
ಗಳಿಗೆ ಮಾಡುತ್ತೀರಾ‘ ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು. ಗಂಡು ಕೋತಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ
ಎಂದು ಜಗದೀಶ ಶೆಟ್ಟರ್‌ ಉತ್ತರಿಸಿದರು.

‘ಕೋಲಾರದಲ್ಲಿ ಮನೆಯೊಳಗೆ ಕೋತಿಗಳು ನುಗ್ಗುತ್ತವೆ ಎಂದು ಜೆಡಿಎಸ್‌ನ ಶ್ರೀನಿವಾಸ ಗೌಡ ಗಮನ ಸೆಳೆದರು. ನನ್ನ ಕ್ಷೇತ್ರದಲ್ಲಿ ಹಂದಿ ಹಾಗೂ ಜಿಂಕೆಗಳ ಹಾವಳಿ ಅತಿಯಾಗಿದೆ’ ಎಂದು ಬಿಜೆಪಿಯ ಕಳಕಪ್ಪ ಬಂಡಿ ಹೇಳಿದರು. ಈ ಮಾತಿಗೆ ಅಮರೇಗೌಡ ಬಯ್ಯಾಪುರ, ಹಾಲಪ್ಪ ಆಚಾರ್‌ ಧ್ವನಿಗೂಡಿಸಿದರು.

‘ಕಾಡು ಪ್ರಾಣಿಗಳು ತೋಟಕ್ಕೆ ನುಗ್ಗಿ ಹಾನಿ ಮಾಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಅವುಗಳನ್ನು ಗುಂಡಿಕ್ಕಿ ಕೊಲ್ಲಲು ಅನುಮತಿ ಕೊಡಿ’ ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು. ‘ಅರಣ್ಯ ಇಲಾಖೆಯನ್ನು ನೋಡಿಯೇ ಅರಣ್ಯ ರೋದನ ಪದ ಬಂದಿರಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ವನ್ಯಪ್ರಾಣಿಗಳಿಂದ ಉಂಟಾದ ಹಾನಿಗಳಿಗೆ ನೀಡುವ ಪರಿಹಾರ ಅವೈಜ್ಞಾನಿಕ ಎಂದು ಜೆಡಿಎಸ್‌ನ ಎಚ್‌.ಕೆ.ಕುಮಾರಸ್ವಾಮಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.