ನವದೆಹಲಿ: ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದ ಭಾರತ್ ಹೆವಿ ಎಲೆಕ್ಟ್ರಿಕಲ್ (ಬಿಎಚ್‌ಇಎಲ್) ಕಂಪನಿಯ 'ಉತ್ಕರ್ಷ ದಿವಸ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಕಳೆದ ಸಾಲಿನಲ್ಲಿ ಕಂಪನಿಯ ಅಭಿವೃದ್ಧಿಗೆ ಕೊಡುಗೆ ನೀಡಿರುವ ಸಿಬ್ಬಂದಿಗೆ 'ಉತ್ಕೃಷ್ಟತಾ ಪುರಸ್ಕಾರ' (ಶ್ರೇಷ್ಠತಾ ಪುರಸ್ಕಾರ) ಸೇರಿ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಿದರು.
ನೋಯ್ಡಾದಲ್ಲಿರುವ ಬಿಎಚ್ಇಎಲ್ ಟೌನ್ ಶಿಪ್‌ನಲ್ಲಿ ನಡೆದ ಬಿಎಚ್ಇಎಲ್ ದಿನಾಚರಣೆ ಹಾಗೂ ಉತ್ಕೃಷ್ಟತಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ವಿವಿಧ ಘಟಕಗಳ ಉತ್ತಮ ಸಾಧನೆಯನ್ನು ಗುರುತಿಸಿ ಗೌರವಿಸಿದರು.
2019-20ನೇ ಸಾಲಿನ ಉತ್ಕೃಷ್ಟತಾ ಪುರಸ್ಕಾರಕ್ಕೆ ಪಾತ್ರವಾಗಿರುವ ಬೆಂಗಳೂರಿನ ಬಿಎಚ್ಇಎಲ್ ಎಲೆಕ್ಟ್ರಾನಿಕ್ ವಿಭಾಗದ ಮುಕೇಶ್ ಕುಮಾರ್, 2020-21ನೇ ಸಾಲಿನ ಉತ್ಕೃಷ್ಟತಾ ಪುರಸ್ಕಾರಕ್ಕೆ ಪಾತ್ರರಾಗಿರುವ ಇದೇ ಬೆಂಗಳೂರು ಘಟಕದ ತೌಸಿಫ್ ಅವರಿಗೆ ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು.
2021-22ನೇ ಸಾಲಿನ ಪ್ರತಿಬದ್ಧತಾ ಪುರಸ್ಕಾರಕ್ಕೆ ಪಾತ್ರರಾಗಿರುವ ಬೆಂಗಳೂರಿನ ಬಿಎಚ್ಇಎಲ್ ಎಲೆಕ್ಟ್ರಾನಿಕ್ ವಿಭಾಗದ ರಾಖಿ ಎಲ್. ಮೋಹನ್ ಅವರಿಗೆ, 2022-23ನೇ ಸಾಲಿನ ಅನುಸಂಧಾನ ಪುರಸ್ಕಾರಕ್ಕೆ ಪಾತ್ರವಾಗಿರುವ ಬೆಂಗಳೂರಿನ ಬಿಎಚ್ಇಎಲ್ ಎಲೆಕ್ಟ್ರಾನಿಕ್ ವಿಭಾಗದ ಧ್ಯಾನ್ ಜ್ಯೋತಿ ಸೈಕಿಯಾ ಹಾಗೂ 2023-24ನೇ ಸಾಲಿನಲ್ಲಿ ಉತ್ಪಾದಕ ಪುರಸ್ಕಾರಕ್ಕೆ ಪಾತ್ರರಾಗಿರುವ ಇದೇ ಘಟಕದ ಆರ್.ಅನೂಪ್ ಕುಮಾರ್ ಅವರಿಗೆ ಪುರಸ್ಕಾರ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.