ADVERTISEMENT

ವಾದಾಲಯಗಳಾಗುತ್ತಿರುವ ವಿಶ್ವವಿದ್ಯಾಲಯಗಳು: ಬರಗೂರು ರಾಮಚಂದ್ರಪ್ಪ ಬೇಸರ

ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ *ಗುರುಲಿಂಗ ಕಾಪಸೆಗೆ ‘ಶ್ರೀಸಾಹಿತ್ಯ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 15:49 IST
Last Updated 12 ಫೆಬ್ರುವರಿ 2022, 15:49 IST
ಬಿ.ಎಂ.ಶ್ರೀ. ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಗುರುಲಿಂಗ ಕಾಪಸೆ ಅವರಿಗೆ ‘ಶ್ರೀಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ನಿಂತವರು ಎಡದಿಂದ) ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ಬರಗೂರು ರಾಮಚಂದ್ರಪ್ಪ, ಪ್ರತಿಷ್ಠಾನದ ಕೋಶಾಧಿಕಾರಿ ಎಸ್. ಅನಿಲ್ ಕುಮಾರ್, ಕಾರ್ಯದರ್ಶಿ ಬಿ.ಸಿ. ರಾಜಕುಮಾರ್, ಪಿ.ವಿ. ನಾರಾಯಣ ಮತ್ತು ನಿಕಟಪೂರ್ವ ಅಧ್ಯಕ್ಷ ಆರ್. ಲಕ್ಷ್ಮೀನಾರಾಯಣ ಇದ್ದರು -ಪ್ರಜಾವಾಣಿ ಚಿತ್ರ
ಬಿ.ಎಂ.ಶ್ರೀ. ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಗುರುಲಿಂಗ ಕಾಪಸೆ ಅವರಿಗೆ ‘ಶ್ರೀಸಾಹಿತ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. (ನಿಂತವರು ಎಡದಿಂದ) ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ, ಬರಗೂರು ರಾಮಚಂದ್ರಪ್ಪ, ಪ್ರತಿಷ್ಠಾನದ ಕೋಶಾಧಿಕಾರಿ ಎಸ್. ಅನಿಲ್ ಕುಮಾರ್, ಕಾರ್ಯದರ್ಶಿ ಬಿ.ಸಿ. ರಾಜಕುಮಾರ್, ಪಿ.ವಿ. ನಾರಾಯಣ ಮತ್ತು ನಿಕಟಪೂರ್ವ ಅಧ್ಯಕ್ಷ ಆರ್. ಲಕ್ಷ್ಮೀನಾರಾಯಣ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಶ್ವವಿದ್ಯಾಲಯಗಳು ಮೂಲ ಉದ್ದೇಶಗಳನ್ನು ಮರೆತು ವಿವಾದಾಲಯಗಳಾಗುತ್ತಿವೆ. ಕನ್ನಡಕ್ಕಾಗಿ ಇರುವ ಏಕೈಕ ವಿಶ್ವವಿದ್ಯಾಲಯವೂ ಆರ್ಥಿಕವಾಗಿ ಸೊರಗಿ, ವಿದ್ಯುತ್ ಬಿಲ್ ಪಾವತಿಸಲಾಗದ ಸ್ಥಿತಿಗೆ ತಲುಪಿರುವುದು ಅವಮಾನಕರ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಬಿ.ಎಂ.ಶ್ರೀ. ಪ್ರತಿಷ್ಠಾನವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ವಾಂಸ ಗುರುಲಿಂಗ ಕಾಪಸೆ ಅವರಿಗೆ 2022ನೇ ಸಾಲಿನ‘ಶ್ರೀಸಾಹಿತ್ಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

‘ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ₹ 24 ಕೋಟಿ ಅನುದಾನವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರಿಂದ ವಿದ್ಯುತ್ ಹಾಗೂ ನೀರಿನ ಬಿಲ್ ಕೂಡ ಪಾವತಿಯಾಗುತ್ತಿಲ್ಲ. ಸಂಶೋಧನಾ ವಿದ್ಯಾರ್ಥಿಗಳಿಗೆ 36 ತಿಂಗಳುಗಳಿಂದ ಶಿಷ್ಯವೇತನವನ್ನೂ ನೀಡಿಲ್ಲ. ವಿಶ್ವವಿದ್ಯಾಲಯವುಆರ್ಥಿಕ ದುಃಸ್ಥಿತಿ ತಲುಪಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಆದಷ್ಟು ಬೇಗ ಸರ್ಕಾರವು ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ವಿಶ್ವವಿದ್ಯಾಲಯವನ್ನು ರಕ್ಷಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬಿ.ಎಂ.ಶ್ರೀ. ಸೇರಿದಂತೆ ಹಲವು ಕನ್ನಡ ಸಂಸ್ಥೆಗಳು ಸರ್ಕಾರಕ್ಕಿಂತಲೂ ಉತ್ತಮವಾಗಿ ಕನ್ನಡ ಸೇವೆ ಮಾಡುತ್ತಿವೆ. ಅತ್ಯುತ್ತಮವಾದ ಕನ್ನಡ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ನಿಜವಾದ ಕನ್ನಡದ ಕೆಲಸ ಮಾಡುವ ಸಂಘ-ಸಂಸ್ಥೆಗಳಿಗೆ ಅನುದಾನ ನೀಡುವ ಮೂಲಕ ಆರ್ಥಿಕ ಬಲ ತುಂಬಬೇಕು’ ಎಂದು ಒತ್ತಾಯಿಸಿದರು.

ವಿದ್ವಾಂಸ ಪಿ.ವಿ. ನಾರಾಯಣ, ‘ಇವತ್ತು ಧರ್ಮ ಮತ್ತು ದೇವರ ಹೆಸರಲ್ಲಿ ಏನೇನೆಲ್ಲ ನಡೆಯುತ್ತಿವೆ. ಧರ್ಮವನ್ನು ಕೇವಲ ಆಚರಣೆ ವಿಧಾನದಲ್ಲಿ ನೋಡಿ, ವ್ಯಕ್ತಿಯನ್ನು ಅಳೆಯುವ ಸಮಾಜ ಇದಾಗಿದೆ. ಅರಿವು ಮೂಡಿಸುವವರ ಸಂಖ್ಯೆ ಕಡಿಮೆ ಆಗಿರುವುದರಿಂದಚಿಕ್ಕಮಕ್ಕಳಲ್ಲಿ ದ್ವೇಷ ಹೆಚ್ಚುತ್ತಿದೆ.ಜಾತಿ, ಧರ್ಮ ಮೀರಿದ ಆಲೋಚನಾ ಕ್ರಮ ಬರುವವರೆಗೂ ಈ ಸಮಾಜ ಉದ್ಧಾರ ಆಗುವುದಿಲ್ಲ’ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತಗುರುಲಿಂಗ ಕಾಪಸೆ, ‘ಬಿ.ಎಂ.ಶ್ರೀ. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೂಡುಗೆ ನೀಡಿದ್ದಾರೆ. ಇಂಗ್ಲಿಷ್ ಭಾಷೆಯ ಕುರಿತು ಆಳವಾದ ಜ್ಞಾನ ಹೊಂದಿದ್ದ ಅವರು ಕನ್ನಡದ ಮೇಲೆ ತೋರಿದ ಪ್ರೀತಿಯನ್ನು ಮರೆಯುವಂತಿಲ್ಲ. ನವೋದಯ ಸಾಹಿತ್ಯಕ್ಕೆ ಅವರು ತಮ್ಮದೆ ಆದ ಕೊಡುಗೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.