ADVERTISEMENT

Chandrayaana-3 | ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು: ಬಿ.ಎಲ್.ಸಂತೋಷ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2023, 14:36 IST
Last Updated 14 ಜುಲೈ 2023, 14:36 IST
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್   

ಬೆಂಗಳೂರು: ಚಂದ್ರಯಾನ–3 ಯೋಜನೆಗೆ ಚಾಲನೆ ನೀಡುವ ಮೊದಲು, ಇಸ್ರೊ ವಿಜ್ಞಾನಿಗಳು ತಿರುಪತಿ ಹಾಗೂ ಇನ್ನಿತರ ದೇವಾಲಯಗಳ ದರ್ಶನ ಪಡೆದ ಕುರಿತು ಲೇಖಕರ ಗುಂಪು ಆಕ್ಷೇಪ ವ್ಯಕ್ತಪಡಿಸಿ ಬರೆದ ಬಹಿರಂಗ ಪತ್ರದಲ್ಲಿ ‘ಮಂಗಳಯಾನ–3’ ಎಂದು ನಮೂದಿಸಿದ್ದರ ಕುರಿತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವ್ಯಂಗ್ಯವಾಡಿದ್ದಾರೆ.

’ಇಸ್ರೊ ಸಂಸ್ಥೆಯ ನಡೆ ಖಂಡನೀಯ’ ಎಂಬ ಶೀರ್ಷಿಕೆಯಡಿ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡಿತು. ಈ ಪತ್ರದ ಕೆಳಗೆ ಡಾ. ಮಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಾ. ವೆಂಕಟಯ್ಯ ಅಪ್ಪಗೆರೆ, ಸನತ್ ಕುಮಾರ್ ಬೆಳಗಲಿ, ಎಲ್.ಎನ್.ಮುಕುಂದರಾಜ್, ಡಾ. ಆರ್.ಎನ್.ರಾಜಾನಾಯಕ್, ಕೆ.ಬಿ.ಮಹದೇವಪ್ಪ, ನಾಗೇಶ್ ಅರಳಕುಪ್ಪೆ, ಡಾ. ಹುಲಿಕುಂಟೆಮೂರ್ತಿ, ಎಚ್.ಕೆ.ವಿವೇಕಾನಂದ, ಡಾ. ಎಚ್‌.ಕೆ.ಎಸ್.ಸ್ವಾಮಿ, ಡಿ.ಎಂ.ಮಂಜುನಾಥಸ್ವಾಮಿ, ಕೆ.ಮಹಂತೇಶ್, ಡಾ. ಕೆ.ಎನ್.ನಾಗೇಶ್, ಪ್ರಭಾ ಬೆಳವಂಗಲ ಹಾಗೂ ಅಬ್ಬೂರು ಶಿವರಾಜ್ ಅವರ ಹೆಸರೂ ಇದೆ.

‘ಮಂಳಯಾನ–3‘ಕ್ಕೆ ಇಸ್ರೊ ಸಂಸ್ಥೆ ಸಜ್ಜಾಗಿರುವುದು ಅಭಿನಂದನೀಯ. ಇದೇ ಸಂದರ್ಭದಲ್ಲಿ ಮಂಗಳಯಾನದ ಯಶಸ್ವಿಗಾಗಿ ಇಸ್ರೊದ ಕೆಲವು ವಿಜ್ಞಾನಿಗಳು ಮಂಗಳಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವುದು ತಿಳಿದುಬಂದಿದೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೊದಂತ ಸರ್ಕಾರಿ ಸ್ವಾಮ್ಯದ ಸಂಸ್ಥೆಯು ಈ ರೀತಿಯ ನಡೆ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುವಂತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ADVERTISEMENT

‘ಭಾರತದ ಸಂವಿಧಾನ 51ಎ(ಎಚ್‌) ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಇಸ್ರೊ ವಿಜ್ಞಾನಿಗಳು ತಾವು ಸತತವಾಗಿ ಹಲವಾರು ವರ್ಷಗಳಿಂದ ಎಲ್ಲ ಎಡರು ತೊಡರುಗಳ ನಡುವೆ ಸಂಶೋಧಿಸಿ, ಪರೀಕ್ಷಿಸಿ, ರೂಪಿಸಿರುವ ಯಾನದ ಬಗ್ಗೆ ತಮಗೇ ನಂಬಿಕೆ ಇಲ್ಲವೆಂಬುದನ್ನು ಈ ಮೂಲಕ ಸಾಭೀತುಗೊಳಿಸಿದ್ದಾರೆ’ ಎಂದು ಹೇಳಲಾಗಿದೆ.

ಈ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿ.ಎಲ್.ಸಂತೋಷ್, ‘ಚಂದ್ರಯಾನ , ಮಂಗಳಯಾನದ ನಡುವಿನ ಅಂತರ ಗೊತ್ತಿಲ್ಲದ, ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಿರುವ, ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು...’ ಎಂದು ವ್ಯಂಗ್ಯವಾಡಿದ್ದಾರೆ.

’ಮಂಗಳನತ್ತ ಹೊರಟಿದೆ’ ಎಂದ ಸಂಸದೆ ಸುಮಲತಾ

ಚಂದ್ರಯಾನ–3 ಉಡ್ಡಯನ ಯಶಸ್ವಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ ಸಂಸದೆ ಸುಮಲತಾ ಅಂಬರೀಶ್, ‘ರಾಷ್ಟ್ರವೇ ಹೆಮ್ಮೆಪಡುವಂತೆ ‘ಚಂದ್ರಯಾನ–3’ ಯಶಸ್ವಿಯಾಗಿ ಮಂಗಳನತ್ತ ಹೊರಟಿದೆ’ ಎಂದು ಹಂಚಿಕೊಂಡಿದ್ದರು.

'ಮೇಡಂ ಇದು ಚಂದ್ರಯಾನ, ಮಂಗಳಯಾನ ಅಲ್ಲ’ ಎಂದು ನೆಟ್ಟಿಗರು ಗಮನ ಸೆಳೆಯುತ್ತಿದ್ದಂತೆ ‘ಮಂಗಳ’ ಪದ ತೆಗೆದು ‘ಚಂದ್ರನತ್ತ’ ಎಂದು ಬದಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.