ADVERTISEMENT

2ಎ ಪಟ್ಟಿಗೆ ಪ್ರಬಲ ಜಾತಿ ಬೇಡ: ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದ ಮನವಿ ಆಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದ ಮನವಿ ಆಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ‘ಪ್ರಬಲ ಸಮುದಾಯಗಳನ್ನು ಪ್ರವರ್ಗ 2(ಎ) ಪಟ್ಟಿಗೆ ಸೇರ್ಪಡೆ ಮಾಡಬಾರದು. ಈಗ ರಚಿಸಿರುವ ಉನ್ನತ ಮಟ್ಟದ ಸಮಿತಿಯನ್ನು ರದ್ದುಗೊಳಿಸಬೇಕು’ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಒತ್ತಾಯಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷ ’ಮುಖ್ಯಮಂತ್ರಿ‘ ಚಂದ್ರು, ಅಧ್ಯಕ್ಷ ಎಂ.ಸಿ.ವೇಣುಗೋಪಾಲ್‌ ನೇತೃತ್ವದ ನಿಯೋಗ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

‘ಪ್ರವರ್ಗ 2(ಎ) ಪಟ್ಟಿಯಲ್ಲಿ 102 ಸಮುದಾಯಗಳಿದ್ದು, ಶೇ 15ರಷ್ಟು ಮೀಸಲಾತಿ ಹಂಚಿಕೊಳ್ಳುತ್ತಿವೆ. ಪ್ರಬಲ ಸಮುದಾಯಗಳ ಒತ್ತಡ ಗಮನಿಸಿದರೆ ಸಣ್ಣಪುಟ್ಟ ಸಮುದಾಯಗಳ ಭವಿಷ್ಯ ಅತ್ಯಂತ ದಾರುಣವಾಗುವ ಸಾಧ್ಯತೆ ಇದೆ’ ಎಂದು ಮುಖ್ಯಮಂತ್ರಿ ಅವರಿಗೆ ಸಮಿತಿಯ ಗೌರವ ಸಲಹೆಗಾರ ವಿ.ಆರ್. ಸುದರ್ಶನ್ ಮತ್ತು ಸಿ.ಎಸ್. ದ್ವಾರಕನಾಥ್ ಮನವರಿಕೆ ಮಾಡಿದರು.

ADVERTISEMENT

ಮನವಿ ಸ್ವೀಕರಿಸಿದ ಯಡಿಯೂರಪ್ಪ, ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು. ಹಿಂದುಳಿದ ವರ್ಗಗಳಿಗೆ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ’ಮುಖ್ಯಮಂತ್ರಿ‘ ಚಂದ್ರು, ‘ಪ್ರವರ್ಗ 2(ಎ) ಪಟ್ಟಿಗೆ ಸೇರ್ಪಡೆ ಮಾಡುವಂತೆ ಪ್ರಬಲ ಸಮುದಾಯಗಳು ಬಲ ಪ್ರದರ್ಶನ ಮಾಡುತ್ತಿವೆ. ಈಗಾಗಲೇ ಈ ಪಟ್ಟಿಯಲ್ರುವ ಅತಿ ಹಿಂದುಳಿದ ಜಾತಿಗಳು ಮೀಸಲಾತಿ ಪ್ರಯೋಜನ ಪಡೆದುಕೊಳ್ಳಲು ಆಗಿಲ್ಲ. ಹೀಗಿರುವಾಗ ಇನ್ನು ಹೆಚ್ಚಿನ ಜಾತಿಗಳ ಸೇರ್ಪಡೆಯಿಂದ ಈ ಸಣ್ಣಪುಟ್ಟ ಸಮುದಾಯಗಳಿಗೆ ತೊಂದರೆ ಉಂಟಾಗುತ್ತದೆ. ಅತಿ ಹಿಂದುಳಿದ ಜಾತಿಗಳ ಅಸ್ತಿತ್ವ ಮತ್ತು ಆಸ್ಮಿತೆ ಕಾಪಾಡಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷ ಎಂ.ಸಿ ವೇಣುಗೋಪಾಲ್‌ ಮಾತನಾಡಿ, ‘ಈ ಪಟ್ಟಿಯಲ್ಲಿರುವ ಸಮುದಾಯಗಳಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ. ‌ಈಗಾಗಲೇ ಸಿದ್ಧಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ವೇದಿಕೆಯ ಉಪಾಧ್ಯಕ್ಷ ಪಿ.ಆರ್‌. ರಮೇಶ್‌, ‘ಈ ಪಟ್ಟಿಯಲ್ಲಿರುವ ಅಸಹಾಯಕ, ಅಸಂಘಟಿತ ಜಾತಿಗಳ ಜೀವನ್ಮರಣದ ಪ್ರಶ್ನೆ ಇದಾಗಿದೆ. ಸರ್ಕಾರ ಬಲಿಷ್ಠರ ನ್ಯಾಯಬದ್ಧವಲ್ಲದ ಒತ್ತಾಯಕ್ಕೆ ಮಣಿದರೆ ತಬ್ಬಲಿ ಸಮುದಾಯಗಳ ಸಾಮೂಹಿಕ ಆತ್ಮಹತ್ಯೆಗೆ ಪ್ರೇರಣೆಯಾಗುತ್ತದೆ. 102 ಜಾತಿಗಳೂ ಒಟ್ಟಾಗಿ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ’ ಎಂದರು.

24ರಂದು ಸಾರ್ವಜನಿಕ ಸಭೆ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಅವರನ್ನು ಭೇಟಿ ಮಾಡಿದ ನಿಯೋಗವು ಮನವಿ ಸಲ್ಲಿಸಿತು.

ಜಯಪ್ರಕಾಶ್ ಹೆಗ್ಡೆ ಮಾತನಾಡಿ, ‘ಪ್ರವರ್ಗ 2(ಎ) ಪಟ್ಟಿಗೆ ಬೇರೆ ಸಮುದಾಯ ಸೇರ್ಪಡೆ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಅದರ ಭಾಗವಾಗಿ ಈಗಾಗಲೇ ಈ ಪಟ್ಟಿಯಲ್ಲಿರುವ ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಲು ಮಾ.24ರಂದು ಸಾರ್ವಜನಿಕ ಸಭೆ ಕರೆಯಲಾಗಿದೆ. ಅಲ್ಲಿ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಗತ್ಯ ಇರುವ ಅಧ್ಯಯನ ನಡೆಸಿ ವರದಿ ನೀಡಲಾಗುವುದು’ ಎಂದರು.

‘ಬಜೆಟ್‌ನಲ್ಲಿ ಕಾಣಿಸುತ್ತಿದೆ ಕಪ್ಪುಚುಕ್ಕೆ’
ಚಿತ್ರದುರ್ಗ:
‘ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನಿಗಮಗಳಿಗೆ ಹಂಚಿಕೆ ಮಾಡಿದ ಅನುದಾನದ ಬಗ್ಗೆ ಅಸಮಾಧಾನವಿದೆ. ಬಜೆಟ್‌ನಲ್ಲಿ ಇದೊಂದು ಕಪ್ಪುಚುಕ್ಕೆಯಾಗಿ ಕಾಣಿಸುತ್ತಿದೆ’ ಎಂದು ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಮೇಲ್ವರ್ಗದ ನಿಗಮಗಳಿಗೆ ನೀಡಿದ ಅನುದಾನದ ಬಗ್ಗೆ ಆಕ್ಷೇಪವಿಲ್ಲ. ಆದರೆ, ತುಳಿತಕ್ಕೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಆದ್ಯತೆ ಸಿಗಬೇಕು. ಇದರಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಈ ಸಮಸ್ಯೆಯನ್ನು ಸರಿಪಡಿಸಿಕೊಂಡರೆ ಪಕ್ಷಕ್ಕೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ಹೆಚ್ಚು ಒತ್ತು ನೀಡುವಂತೆ ಚರ್ಚಿಸಲಾಗುವುದು. ಸಾಮಾಜಿಕ ಕಳಕಳಿ ಹೊಂದಿದ ಯಡಿಯೂರಪ್ಪ ಅವರು ಸ್ಪಂದಿಸುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.