ADVERTISEMENT

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡ: ಹಿಂದುಳಿದ ಜಾತಿಗಳ ಒಕ್ಕೂಟ ಮನವಿ

ಹಿಂದುಳಿದ ವರ್ಗಗಳ ಆಯೋಗಕ್ಕೆ ಹಿಂದುಳಿದ ಜಾತಿಗಳ ಒಕ್ಕೂಟ ಮನವಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 21:02 IST
Last Updated 3 ಮಾರ್ಚ್ 2022, 21:02 IST

ಬೆಂಗಳೂರು: ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದು’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಪಂಚಮಸಾಲಿ ಸಮುದಾಯವನ್ನು 2-ಎ ಮೀಸಲಾತಿ ಪಟ್ಟಿಗೆ ಸೇರಿಸುವ ಅರ್ಜಿ ವಿಚಾರಣೆ ನಡೆಸುತ್ತಿರುವ ಆಯೋಗಕ್ಕೆ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಮನವಿ ಸಲ್ಲಿಸಿದ್ದರು. ಖುದ್ದು ವಿಚಾರಣೆಗೆ ಹಾಜರಾಗಲು ಆಯೋಗ ಗುರುವಾರ ಸಮಯ ನಿಗದಿ ಮಾಡಿ ನೋಟಿಸ್ ನೀಡಿತ್ತು.

‘ಆಯೋಗಕ್ಕೆ ರವಿವರ್ಮಕುಮಾರ್ ಅವರು ಅಧ್ಯಕ್ಷರಾಗಿದ್ದಾಗ ಲಿಂಗಾಯತ ಸಮುದಾಯವು ಇದೇ ವಿಷಯದ ಸಂಬಂಧ ಸಲ್ಲಿಸಿದ್ದ ಮನವಿ ತಿರಸ್ಕಾರಗೊಂಡಿದೆ. ಈಗ ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡಿಕೆ ಇಟ್ಟಿದೆ. ಈ ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ಯಾವುದೇ ಅಂಕಿ–ಅಂಶಗಳು ಮತ್ತು ದತ್ತಾಂಶಗಳನ್ನು ಈ ಹಿಂದಿನ ಆಯೋಗಗಳು ನೀಡಿಲ್ಲ. ಆಯೋಗದ ವರದಿಗಳಲ್ಲೂ ಇದು ಉಲ್ಲೇಖವಾಗಿಲ್ಲ. ಸಂವಿಧಾನ ಜಾರಿಗೆ ಬಂದ ಬಳಿಕ ನೇಮಕ ಆಗಿರುವ ಯಾವ ಆಯೋಗಗಳೂ (ನಾಗನಗೌಡ ಸಮಿತಿ, ಹಾವನೂರ್ ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ) ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ವಾದ ಮಂಡಿಸಿದರು.

ADVERTISEMENT

‘ಪ್ರವರ್ಗ 2ಎ ಅಡಿಯಲ್ಲಿ ಇರುವ ಸಮುದಾಯಗಳಷ್ಟು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಬಗ್ಗೆ ದತ್ತಾಂಶದೊಂದಿಗೆ ಸ್ಪಷ್ಟಪಡಿಸಬೇಕು. ಈ ಯಾವುದೇ ಅಂಶಗಳು ಪಂಚಮಸಾಲಿ ಸಮುದಾಯದ ಮನವಿಯಲ್ಲಿ ಕಂಡು ಬರುವುದಿಲ್ಲ. ಮನವಿ ಪುರಸ್ಕರಿಸುವ ಮೊದಲು ಪಂಚಮಸಾಲಿ ಸಮುದಾಯಗಳ ಮನೆ ಮನೆ ಸಮೀಕ್ಷೆ ನಡೆಸಿ ಅಂಕಿ–ಅಂಶಗಳನ್ನು ಆಯೋಗ ಪಡೆಯಬೇಕು’ ಎಂದು ಮನವಿ ಮಾಡಿದರು.

‘ಇನ್ನೂ ಹಲವು ಮಾಹಿತಿಯನ್ನು ಲಿಖಿತವಾಗಿ ಸಲ್ಲಿಸಲು ಹದಿನೈದು ದಿನಗಳ ಅವಕಾಶ ನೀಡಬೇಕು ಎಂದು ಕೋರಲಾಯಿತು’ ಎಂದು ವೆಂಕಟರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.