ADVERTISEMENT

₹ 37,124 ಕೋಟಿ ನೀಡಿದರೂ ಬದಲಾಗಿಲ್ಲ ಹಿಂದುಳಿದ ತಾಲ್ಲೂಕುಗಳು: ಕೆ.ಸಿ. ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 11:56 IST
Last Updated 16 ಫೆಬ್ರುವರಿ 2021, 11:56 IST
   

ಬೆಂಗಳೂರು: ‘ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ‘ವಿಶೇಷ ಅಭಿವೃದ್ಧಿ ಯೋಜನೆಯಡಿ’ (ಎಸ್‍ಡಿಪಿ) ಇನ್ನು ಮುಂದೆ ಹಂಚಿಕೆಯಾಗುವ ಅನುದಾನದ ಬಳಕೆಗೆ ಸ್ಪಷ್ಟ ನಿಯಮ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಸೂಚಿಸಿದರು.

ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಎಸ್‍ಡಿಪಿ ಅಡಿ ನೀಡಿದ ಅನುದಾನ ಬಳಕೆಯ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ನಡೆಸಿದ ಸಚಿವರು, ‘ಮುಂದಿನ ಮೂರು ವರ್ಷಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉದ್ಯಮ ವಲಯ ಸೇರಿದಂತೆ ಹಿಂದುಳಿದ ತಾಲ್ಲೂಕುಗಳಲ್ಲಿ ಏನೇನು ಕೆಲಸ ಆಗಬೇಕು, ಬೇಕಾಗುವ ಅನುದಾನವೆಷ್ಟು ಎನ್ನುವುದರ ಕ್ರಿಯಾಯೋಜನೆ ಸಿದ್ದಪಡಿಸಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.

ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಉನ್ನತ ಶಿಕ್ಷಣ, ಇಂಧನ ಇಲಾಖೆ, ತೋಟಗಾರಿಕೆ ಸೇರಿಂದತೆ ಎಲ್ಲ 17 ಇಲಾಖೆಗಳ ಅಧಿಕಾರಿಗಳ ಜೊತೆ ವಿಶೇಷ ಅಭಿವೃದ್ಧಿ ಯೋಜನೆ ಕುರಿತಂತೆ ಸಚಿವರು ಸಭೆ ನಡೆಸಿದರು.

ADVERTISEMENT

‘ಎಸ್‍ಡಿಪಿ ಅಡಿಯಲ್ಲಿ ಹಂಚಿಕೆ ಆಗುವ ಅನುದಾನ ಸರಿಯಾಗಿ ಬಳಕೆಯಾಗಬೇಕು. ಸಾಮಾನ್ಯ ಅನುದಾನದಲ್ಲಿ ಈ ಅನುದಾನವನ್ನು ಸೇರಿಸುವಂತಿಲ್ಲ ಹಾಗೂ ಪ್ರತಿ ಇಲಾಖೆಗೆ ಹಂಚಿಕೆಯಾಗಿರುವ ಅನುದಾನ ಅಲ್ಲಿಯೇ ಸಮರ್ಪಕವಾಗಿ ವೆಚ್ಚವಾಗಬೇಕು’ ಎಂದು ಸಚಿವರು ಸೂಚಿಸಿದ್ದಾರೆ.

‘‍ಹನ್ನೆರಡು ವರ್ಷಗಳಲ್ಲಿ ₹ 37,124.35 ಕೋಟಿ ಅನುದಾನ ನೀಡಿದರೂ ಹಿಂದುಳಿದ ತಾಲ್ಲೂಕುಗಳ ಹಣೆಬರಹ ಬದಲಾಗಿಲ್ಲ. ಅನುದಾನ ಸರಿಯಾದ ರೀತಿಯಲ್ಲಿ ಹಂಚಿಕೆಯಾಗಿಲ್ಲ. ಹೀಗಾಗಿ, 12 ವರ್ಷಗಳಲ್ಲಿ ಹಿಂದುಳಿದ ತಾಲ್ಲೂಕುಗಳು ಅದೇ ಸ್ಥಿತಿಯಲ್ಲೇ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಂಜುಂಡಪ್ಪ ವರದಿ ಪ್ರಕಾರ ಶಿಕ್ಷಣ, ಆರೋಗ್ಯ, ಉದ್ದಿಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಆದರೆ, ಈ ವಲಯಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಆಗಿಲ್ಲ’ ಎಂದರು.

‘ನಂಜುಂಡಪ್ಪ ವರದಿಯಂತೆ ರಾಜ್ಯದ 176 ತಾಲ್ಲೂಕುಗಳ ಪೈಕಿ 114 ತಾಲ್ಲೂಕು ಹಿಂದುಳಿದಿವೆ. 2018ರಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನೀಡಿದ ವರದಿ ಪ್ರಕಾರ, ಇನ್ನೂ 96 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲೇ ಇವೆ. ಸಾವಿರಾರು ಕೋಟಿ ಅನುದಾನ ನೀಡಿದರೂ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ’ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದುಳಿದ ತಾಲ್ಲೂಕುಗಳ ಶಾಲೆ, ಕಾಲೇಜು, ಪಾಲಿಟೆಕ್ನಿಕ್ಗಳಲ್ಲಿ ಗ್ರಂಧಾಲಯ, ಶೌಚಾಲಯ, ತರಗತಿ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್ ಸೇರಿದಂತೆ ಮೂಲಸೌಲಭ್ಯಗಳ ಕೊರತೆ ಇದೆ. 2007-08ರಿಂದ ಇದುವರೆಗೆ ₹ 37,124.35 ಕೋಟಿ ನೀಡಲಾಗಿದೆ. ಅದರಲ್ಲಿ ₹ 27,346.32 ಕೋಟಿ ಬಳಕೆಯಾಗಿದೆ. ಆದರೂ ಹಿಂದುಳಿದ ತಾಲ್ಲೂಕುಗಳ ಹಣೆಬರಹ ಮಾತ್ರ ಬದಲಾಗಿಲ್ಲ. ಮೌಲ್ಯಮಾಪನ ಪ್ರಾಧಿಕಾರದ ಪ್ರಕಾರ ಬೆಂಗಳೂರು ವಿಭಾಗದಲ್ಲಿ 8 ತಾಲ್ಲೂಕುಗಳು, ಬೆಳಗಾವಿ ವಿಭಾಗದ 3, ಕಲಬುರ್ಗಿ ವಿಭಾಗದ 18 ತಾಲ್ಲೂಕುಗಳು ಸೇರಿದಂತೆ ಒಟ್ಟು 29 ತಾಲ್ಲೂಕುಗಳು ಅತ್ಯಂತ ಹಿಂದುಳಿದಿವೆ. 24 ತಾಲ್ಲೂಕುಗಳು ಅತಿ ಹಿಂದುಳಿದಿದ್ದು, 43 ತಾಲ್ಲೂಕುಗಳು ಹಿಂದುಳಿದಿವೆ’ ಎಂದರು.

‘ನಂಜುಂಡಪ್ಪ ವರದಿಯಂತೆ ಆದ್ಯತಾ ವಲಯಕ್ಕೆ ಹೆಚ್ಚಿನ ಅನುದಾನ ಬಳಕೆಯಾಗಬೇಕಿತ್ತು. ಆದರೆ ಸೂಕ್ತ ನಿಯಮಾವಳಿ ಇಲ್ಲದ ಕಾರಣ ಅನುದಾನ ಸರಿಯಾಗಿ ಹಂಚಿಕೆ ಆಗಿಲ್ಲ. 2007-08ರಿಂದ ಮುಂದಿನ 8 ವರ್ಷದಲ್ಲಿ ಪ್ರವಾಸೋಧ್ಯಮಕ್ಕೆ ₹ 2 ಸಾವಿರ ಕೋಟಿ ಶಿಫಾರಸು ಮಾಡಲಾಗಿತ್ತು. ಆದರೆ, ₹ 599 ಕೋಟಿ ಮಾತ್ರ ಹಂಚಿಕೆಯಾಗಿದೆ. ಕೊಳಚೆ ನಿರ್ಮೂಲನೆ, ಉತ್ತರ ಕರ್ನಾಟಕಕ್ಕೆ ನಗರ ನೀರು ಸರಬರಾಜು ಮಂಡಳಿ ಸ್ಥಾಪನೆಗೆ ₹ 3 ಸಾವಿರ ಕೋಟಿ ಶಿಫಾರಸ್ಸಾಗಿದ್ದರೂ ಅನುದಾನವೇ ಹಂಚಿಕೆಯಾಗಿಲ್ಲ. ಕ್ರೀಡೆಗೆ ₹ 25 ಕೋಟಿ ನೀಡುವಂತೆ ಮಾಡಿದ ಶಿಫಾರಸು ಕಡತದಲ್ಲೇ ಉಳಿದಿದೆ’ ಎಂದು ಅವರು ಹೇಳಿದರು.

‘ಹಿಂದುಳಿದ ತಾಲ್ಲೂಕುಗಳಲ್ಲಿ ವಸತಿ, ಗ್ರಾಮೀಣ ಗೃಹ ನಿರ್ಮಾಣ, ಜಲ ಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯಡಿ ₹ 11 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಬಳಕೆಯಾಗಿದೆ. ಪ್ರತಿಯೊಂದು ಇಲಾಖೆಗೆ ಒದಗಿಸುವ ಅನುದಾನದಲ್ಲೇ ವಿಶೇಷ ಅಭಿವೃದ್ಧಿ ಯೋಜನೆಗೆ ಅನುದಾನದ ನಿಗದಿಪಡಿಸಲಾಗುತ್ತಿದೆ. ಇದರಿಂದಾಗಿ ಎಲ್ಲ ತಾಲ್ಲೂಕುಗಳ ಅಭಿವೃದ್ಧಿಗೆ ಅನುದಾನ ಬಳಸಿದಂತೆ ಇಲ್ಲೂ ಬಳಸಿದ್ದು, ಬಿಟ್ಟರೆ ವಿಶೇಷ ಅನುದಾನದ ಸಮರ್ಪಕ ಬಳಕೆ ಆಗಿಲ್ಲ’ ಎಂದರು.

‘2007-08 ರಿಂದ ಮುಂದಿನ 8 ವರ್ಷಗಳ ವರೆಗೆ ಸಾಮಾನ್ಯ ಕಾರ್ಯಕ್ರಮಗಳಿಂದ ₹ 15 ಸಾವಿರ ಕೋಟಿ ಹಾಗೂ ಹೆಚ್ಚುವರಿಯಾಗಿ ₹ 16 ಸಾವಿರ ಕೋಟಿಯನ್ನು ವಿಶೇಷ ಅಭಿವೃದ್ಧಿ ಯೋಜನೆ ಮೂಲಕ ಬಳಕೆ ಮಾಡಬೇಕು ಎಂಬ ಗುರಿ ಹೊಂದಲಾಗಿತ್ತು’ ಎಂದರು.

ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.