ADVERTISEMENT

ಚಿಕಿತ್ಸೆ ಸಿಗದೆ ಮಹಿಳೆ ಸಾವು: ಆರೋಗ್ಯ ಸಚಿವ ತವರು ಜಿಲ್ಲೆಯಲ್ಲಿ ಪ್ರಕರಣ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತವರು ಜಿಲ್ಲೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:15 IST
Last Updated 24 ಫೆಬ್ರುವರಿ 2023, 22:15 IST
ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ಮಂಗಮ್ಮ
ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ ಮಂಗಮ್ಮ    

ಬಾಗೇಪಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆ): ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಂಗಮ್ಮ (35) ಎಂಬುವರು ಶುಕ್ರವಾರ ಮೃತಪಟ್ಟಿದ್ದಾರೆ ಎಂಬ ದೂರು ಕೇಳಿಬಂದಿದೆ.

ಬಿಳ್ಳೂರು ಗ್ರಾಮ ಹೊರವಲಯದ ಗುಡಿಸಲಿನಲ್ಲಿ ಅವರು ವಾಸವಾಗಿದ್ದರು. ಮಂಗಮ್ಮ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಜ್ವರ ಹೆಚ್ಚಿದ ಕಾರಣ ಬೆಳಿಗ್ಗೆ 10ಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಕರು ಕರೆ ತಂದಿದ್ದಾರೆ. ಆದರೆ, ಸಕಾಲದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಮಂಗಮ್ಮ ಅವರ ಸಂಬಂಧಿಕರು ಮತ್ತು ನೆರೆಹೊರೆಯವರು ದೂರಿದ್ದಾರೆ.

‘ಹೆಚ್ಚಿನ ಚಿಕಿತ್ಸೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲು ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಸಹ ಇರಲಿಲ್ಲ. ಆಂಬುಲೆನ್ಸ್‌ಗಾಗಿ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಗೆ ಕರೆ ಮಾಡಿದರೆ 2 ಗಂಟೆ ತಡವಾಗುತ್ತದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಮಹಿಳೆ ಆಸ್ಪತ್ರೆ
ಯಲ್ಲಿ ಮೃತಪಟ್ಟಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತವರು ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದಿಗೂ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ಇಲ್ಲ.

‘ಬಿಳ್ಳೂರು ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ಇಲ್ಲ. ರೋಗಿಗಳು ಗಂಟೆಗಟ್ಟಲೇ ಕಾಯಬೇಕು. ತುರ್ತು ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಪರದಾಡುತ್ತಾರೆ. ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲ್ಲೂಕು ಕೇಂದ್ರಗಳು ಗ್ರಾಮದಿಂದ 40 ಕಿ.ಮೀ. ದೂರದಲ್ಲಿವೆ’ ಎಂದು ಬಿಳ್ಳೂರಿನ ಅನಿಲ್ ಎಂಬುವವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಂಗಳಿನಿಂದ ತರಬೇತಿಯಲ್ಲಿ ವೈದ್ಯರು’

ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಒಂದು ತಿಂಗಳ ಕಾಲ ತರಬೇತಿ ಪಡೆಯಲು ತೆರಳಿದ್ದಾರೆ. ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ವಾರದಲ್ಲಿ ಮೂರು ದಿನ ಬಿಳ್ಳೂರಿನಲ್ಲಿ ಕಾರ್ಯ ನಿರ್ವಹಿಸಲು ನಿಯೋಜಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸಿ.ಎನ್. ಸತ್ಯನಾರಾಯಣರೆಡ್ಡಿ ತಿಳಿಸಿದರು.

‘ಒಂದು ತಿಂಗಳಿನಿಂದ ಮಹಿಳೆ ಅನಾರೋಗ್ಯದಿಂದ ಬಳಲಿದ್ದಾರೆ. ಚಿಕಿತ್ಸೆಗೆ ಬಿಳ್ಳೂರು ಕೇಂದ್ರಕ್ಕೆ ಕರೆತಂದಾಗ ವೈದ್ಯರು ಇರಲಿಲ್ಲ. ಆದರೆ, ಕೇಂದ್ರದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಆಕೆಯ ತಪಾಸಣೆ ನಡೆಸಿದ್ದಾರೆ. ಆಗ ಆಕೆಯ ದೇಹ ನಿಸ್ತೇಜಗೊಂಡಿರುವುದು ಕಂಡುಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.