ADVERTISEMENT

ಬೈತ್ತಡ್ಕ: ಕಾರು ಹೊಳೆಗೆ ಬಿದ್ದು ನೀರುಪಾಲಾಗಿದ್ದ ಯುವಕರಿಬ್ಬರ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 10:30 IST
Last Updated 12 ಜುಲೈ 2022, 10:30 IST
ಧನುಷ್‌ ಮತ್ತು ಧನಂಜಯ್‌
ಧನುಷ್‌ ಮತ್ತು ಧನಂಜಯ್‌   

ಪುತ್ತೂರು: ಕಡಬ ತಾಲ್ಲೂಕಿನ ಕಾಣಿಯೂರು ಸಮೀಪ ಸುಬ್ರಹ್ಮಣ್ಯ-ಪುತ್ತೂರು-ಮಂಜೇಶ್ವರ ರಸ್ತೆಯ ಬೈತಡ್ಕ ಸೇತುವೆಯ ಬಳಿ ಶನಿವಾರ ರಾತ್ರಿ ತುಂಬಿ ಹರಿಯುತ್ತಿದ್ದ ಗೌರಿಹೊಳೆಗೆ ಕಾರು ಬಿದ್ದು, ನೀರು ಪಾಲಾಗಿದ್ದ ಇಬ್ಬರು ಯುವಕರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಮಂಗಳ‌ವಾರ ಪತ್ತೆಯಾಗಿವೆ.

ಬಂಟ್ವಾಳ ತಾಲ್ಲೂಕಿನ ವಿಟ್ಲ ಮಾಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಶಾಂತಿಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್ (26) ಮತ್ತು ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮದ ಕೋನಾಲೆ ನಿವಾಸಿ ಚನಿಯಪ್ಪ ನಾಯ್ಕ ಅವರ ಧನಂಜಯ (36) ಮೃತರು.

ಬೈತ್ತಡ್ಕ ಸೇತುವೆಯಿಂದ ಸುಮಾರು 200 ಮೀಟರ್‌ ದೂರದ ಮರಕ್ಕಡ ಜೇಡರಕೇರಿ ಎಂಬಲ್ಲಿ ಹೊಳೆಯ ಬದಿಯಲ್ಲಿದ್ದ ಬಂಡೆಕಲ್ಲು ಮತ್ತು ಮರದಕೊಂಬೆಯೊಂದರ ನಡುವೆ ಧನಂಜಯ ಅವರ ಮೃತದೇಹ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ. ಆ ಸ್ಥಳದಿಂದ 50 ಮೀಟರ್‌ ‌ದೂರದಲ್ಲಿ ಧನುಷ್ ಅವರ ಮೃತದೇಹ ಪೊದೆಗಳ ನಡುವೆ ಸಿಲುಕಿಕೊಂಡಿತ್ತು. ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಹೊಳೆ ನೀರಿನ ಮಟ್ಟ ಕಡಿಮೆಯಾಗಿತ್ತು. ಹಾಗಾಗಿ ಮೃತದೇಹಗಳು ಗೋಚರಿಸಿವೆ.

ADVERTISEMENT

ಪುತ್ತೂರು ಸವಣೂರು ಕಡೆಯಿಂದ ಕಾಣಿಯೂರು ಕಡೆಗೆ ವೇಗವಾಗಿ ತೆರಳುತ್ತಿದ್ದ ಬಿಳಿ ಬಣ್ಣದ ಮಾರುತಿ 800 ಕಾರು ಶನಿವಾರ ರಾತ್ರಿ 12.05ರ ವೇಳೆಗೆ ಬೈತ್ತಡ್ಕ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿತ್ತು. ಬೈತ್ತಡ್ಕ ಮಸೀದಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳು ಈ ಅಪಘಾತ ನಡೆದಿದ್ದನ್ನು ಖಚಿತಪಡಿಸಿದ್ದವು.

ಅಗ್ನಿಶಾಮಕದಳ, ಮುಳುಗು ತಜ್ಞರು ಹಾಗೂ ಸವಣೂರಿನ ನಾಲ್ವರು ಮುಳುಗುತಜ್ಞರನ್ನು ಹಾಗೂ ಗುತ್ತಿಗಾರಿನ ವಿಪತ್ತು ನಿರ್ವಹಣಾ ಘಟಕದವರನ್ನು ಕರೆಸಿಕೊಂಡು ಸ್ಥಳೀಯರ ಸಹಕಾರದೊಂದಿಗೆ ಯುವಕರಿಬ್ಬರಿಗಾಗಿ ಶೋಧಕಾರ್ಯ ಆರಂಭಿಸಲಾತ್ತು. ಭಾನುವಾರ ಮಧ್ಯಾಹ್ನ ವೇಳೆಗೆ ಕಾರನ್ನು ಪತ್ತೆ ಮಾಡಿ ಮೇಲಕ್ಕೆತ್ತಲಾಗಿದ್ದರೂ ಕಣ್ಮರೆಯಾದ ಅವರಿಬ್ಬರ ಸುಳಿವು ಲಭಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.