ADVERTISEMENT

ಸಿದ್ದರಾಮಯ್ಯ, ಎಚ್‌ಡಿಕೆ, ಬಿಎಸ್‌ವೈ ನಡುವೆ ಹೊಂದಾಣಿಕೆ ರಾಜಕೀಯ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:50 IST
Last Updated 20 ಮಾರ್ಚ್ 2021, 19:50 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನಡುವೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಶನಿವಾರ ಇಲ್ಲಿ ಆರೋಪಿಸಿದರು.

‘ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪರಸ್ಪರ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರೂ ಸೇರಿ ಯಡಿಯೂರಪ್ಪ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಯಡಿಯೂರಪ್ಪನವರು ಎಲ್ಲಾ ಪಕ್ಷದವರಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ. ಮೂರೂ ಪಕ್ಷಗಳಲ್ಲಿ ತತ್ವ ಸಿದ್ಧಾಂತ ಇಲ್ಲ. ರಾಜ್ಯದ ಜನರು ಇದನ್ನು ಗಮನಿಸಬೇಕು’ ಎಂದರು.

‘ಬಡವರ ಆರ್ಥಿಕ ನೀತಿಗಾಗಿ, ದೇಶದ ಅಭಿವೃದ್ಧಿಗಾಗಿ ಹೊಂದಾಣಿಕೆ ಮಾಡಿಕೊಂಡಿದ್ದರೆ ಒಳ್ಳೆಯದಿತ್ತು. ಆದರೆ, ‘ಭ್ರಷ್ಟಾಚಾರ ಮುಚ್ಚಿಕೊಳ್ಳಲು, ಪರಸ್ಪರ ರಕ್ಷಣೆ ಮಾಡಿಕೊಳ್ಳಲು ಹೊಂದಾಣಿಕೆ ನಡೆಯುತ್ತಿದೆ. ಸಿ.ಡಿ ವಿಚಾರದಲ್ಲೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ’ ಎಂದು ದೂರಿದರು.

ADVERTISEMENT

‘ಸಿದ್ದರಾಮಯ್ಯ ಅವರ ರೀಡೂ, ಅರ್ಕಾವತಿ ವಿಚಾರ ಏನಾಯಿತು? ಕುಮಾರಸ್ವಾಮಿ 700 ಮಂದಿಯ ದೂರವಾಣಿ ಕದ್ದಾಲಿಕೆ ಮಾಡಿದ ಪ್ರಕರಣಕ್ಕೆ ಸಿಲುಕಿದ್ದಾರೆ. ಮೂವರು ಸ್ವಾಮೀಜಿಯ ದೂರವಾಣಿ ಕೂಡ ಕದ್ದಾಲಿಕೆ ಆಗಿದೆ. ರಾಮಕೃಷ್ಣ ಹೆಗಡೆ ಕೇವಲ ಒಂದು ದೂರವಾಣಿ ಕದ್ದಾಲಿಕೆಗೆ ರಾಜೀನಾಮೆ ನೀಡಿದ್ದರು’ ಎಂದರು.

ಭ್ರಷ್ಟಾಚಾರದ ವೈರಸ್‌ಗೆ ಲಸಿಕೆ ಯಾವುದು ಎಂದು ಸಿದ್ದರಾಮಯ್ಯ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿ, ‘ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಇದ್ದ ‘ಲೋಕಾಯುಕ್ತ ಲಸಿಕೆ’ಯನ್ನು ಸಿದ್ದರಾಮಯ್ಯನವರೇ ನಾಶ ಮಾಡಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ರಿಟಿಷರ ರೀತಿ: ‘ಸಿದ್ದರಾಮಯ್ಯ ಹಾಗೂ ಅವರ ತಂಡ ಬ್ರಿಟಿಷರಿದ್ದಂತೆ. ವಲಸಿಗರೆಲ್ಲಾ ಸೇರಿ ಮೂಲ ಕಾಂಗ್ರೆಸಿಗರನ್ನು ಮುಗಿಸುತ್ತಿದ್ದಾರೆ’‌ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.