ADVERTISEMENT

ಹಿರಿಯ ರಂಗಕರ್ಮಿ ಶ್ರೀಪತಿ ಬಲ್ಲಾಳ ಇನ್ನು ನೆನಪು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:05 IST
Last Updated 20 ಏಪ್ರಿಲ್ 2019, 20:05 IST
ಶ್ರೀಪತಿ ಬಲ್ಲಾಳ
ಶ್ರೀಪತಿ ಬಲ್ಲಾಳ   

ಬೆಂಗಳೂರು: ದಕ್ಷಿಣ ಕನ್ನಡದ‌‌ ಉಡುಪಿಯ ಅಂಬಲಪಾಡಿಯಿಂದ ವಲಸೆ ಹೋಗಿ ಮುಂಬೈನಲ್ಲಿ ಹವ್ಯಾಸಿ ರಂಗಭೂಮಿ ಕಟ್ಟಿ ಬೆಳೆಸಲು ಶ್ರಮಿಸಿದ ಪ್ರಮುಖರಲ್ಲಿ ಒಬ್ಬರಾದ ರಂಗಕರ್ಮಿ ಶ್ರೀಪತಿ ಬಲ್ಲಾಳ (91) ಇನ್ನು ನೆನಪು ಮಾತ್ರ.

ವಯೋಸಹಜ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದ ಶ್ರೀಪತಿ ಬಲ್ಲಾಳ ಅವರು, ಕೋರಮಂಗಲದ ತಮ್ಮ ಮನೆಯಲ್ಲಿ ಶುಕ್ರವಾರಇಹಲೋಕದ ವ್ಯಾಪಾರ ಮುಗಿಸಿದ್ದಾರೆ. ಬಸವನಗುಡಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

ಮೃತರಿಗೆ ಪತ್ನಿ ಖ್ಯಾತ ನಟಿ ಕಿಶೋರಿ ಬಲ್ಲಾಳ ಮತ್ತು ನಟಿ, ಲೇಖಕಿಯಾದ ಸೊಸೆ ಅಹಲ್ಯಾ ಬಲ್ಲಾಳ ಇದ್ದಾರೆ. ಬಲ್ಲಾಳರ ಪುತ್ರ ರಂಗಕರ್ಮಿ ಸಂತೋಷ್‌ ಬಲ್ಲಾಳ ಹತ್ತು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ.

ADVERTISEMENT

ಧೀಮಂತ ನಟ, ನಿರ್ದೇಶಕ ಮತ್ತು ಚತುರಸಂಘಟಕರಾಗಿ ಬಲ್ಲಾಳ ಅವರದು ಮುಂಬಯಿಯ ಹವ್ಯಾಸಿರಂಗಭೂಮಿಯಲ್ಲಿ ದೊಡ್ಡ ಹೆಸರು. ಇವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳರ ಸಹೋದರರಾದ ಇವರು, ರಾಮದಾಸ್‌ ಬಲ್ಲಾಳ ಮತ್ತು ಕಲ್ಯಾಣಿ ದಂಪತಿಯ ಏಳು ಗಂಡು ಮತ್ತು ಆರು ಹೆಣ್ಣು ಮಕ್ಕಳ ದೊಡ್ಡ ಸಂಸಾರದಲ್ಲಿ ಒಬ್ಬರು. ಕಾಲೇಜು ಶಿಕ್ಷಣ ಪಡೆಯಲು 1947 ಸುಮಾರಿಗೆ ಮುಂಬೈಗೆ ಹೋಗಿದ್ದ ಅವರು, ರಂಗಚಟುವಟಿಕೆಯ ಆಸಕ್ತಿಯಿಂದಾಗಿ ಅಲ್ಲಿಯೇ ನಾಲ್ಕು ದಶಕಗಳ ಕಾಲ ನೆಲೆ ನಿಂತಿದ್ದರು.

ಜೀವನದ ಸಂಧ್ಯಾಕಾಲವನ್ನುತಾಯ್ನಾಡಿನಲ್ಲೇ ಕಳೆಯಲು ಶ್ರೀಪತಿ ಅವರುಪತ್ನಿ ಕಿಶೋರಿ ಅವರ ಜೊತೆ 25 ವರ್ಷಗಳ ಹಿಂದೆಯೇ ಮುಂಬೈನಿಂದಬೆಂಗಳೂರಿಗೆಮರಳಿ ಬಂದಿದ್ದರು. ಅದಕ್ಕೂ ಮೊದಲು 15 ವರ್ಷ ಕಾಲ ಮುಂಬೈ ಕರ್ನಾಟಕ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಬೆಂಗಳೂರಿನ ನಟರಂಗ ಸೇರಿ ಅನೇಕ ರಂಗ ತಂಡಗಳು ಮತ್ತು ಮುಂಬೈನಲ್ಲಿನಾಟಕೋತ್ಸವ ಜನಪ್ರಿಯವಾಗಲು ಸಾಕಷ್ಟು ಶ್ರಮಿಸಿದ್ದರು.

ತಮ್ಮ 16ನೇ ವಯಸ್ಸಿನಲ್ಲೇ ರಂಗ ಪ್ರವೇಶ ಮಾಡಿದ ಶ್ರೀಪತಿ ಅವರು ಕಿಶೋರಿಯವರ ಜತೆಕುವೆಂಪು ಅವರ ‘ಬಿರುಗಾಳಿ’ ನಾಟಕದಲ್ಲಿ ಮೊದಲ ಬಾರಿಗೆಅಭಿನಯಿಸಿದರು. ವಸಂತ ಕವಲಿ ನಿರ್ದೇಶಿಸಿದ ‘ಎನ್ನ ಮುದ್ದಿನಮುದ್ದಣ’ ನಾಟಕದಲ್ಲಿ ಶ್ರೀಪತಿ–ಕಿಶೋರಿ ಜೋಡಿ ಮುದ್ದಣ ಮನೋರಮೆಯಾಗಿ ರಂಗರಸಿಕರ ಮನಸೆಳೆದಿತ್ತು.

ಲಂಕೇಶರ ‘ಸಂಕ್ರಾಂತಿ’, ವ್ಯಾಸರಾಯ ಬಲ್ಲಾಳರ ‘ಮುಳ್ಳಲ್ಲಿದೆ ಮಂದಾರ’, ‘ಗಿಳಿಯು ಪಂಜರದೊಳಿಲ್ಲ’, ಮರಾಠಿಯ ‘ಪದ್ಮಶ್ರೀ ದುಂಡೀರಾಜ್‌’, ಕಾಮತರ ‘ಮಾತೃದೇವೋಭವ’, ಬಿ.ಎ.ಸನದಿಯವರ ‘ನೀಲಾಂಬಿಕೆ’ ಇವೇ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಶ್ರೀಪತಿಯವರದ್ದಾಗಿದೆ. ‘ತರಂಗ’ ತಂಡ ಕಟ್ಟಿ, ಆ ಮೂಲಕ ಹಲವು ನಾಟಕಗಳನ್ನು ರಾಜ್ಯದಾದ್ಯಂತ ಪ್ರದರ್ಶನ ಮಾಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.