ADVERTISEMENT

ಜಿಲ್ಲೆ ವಿಭಜನೆಗೆ ವಿರೋಧ: 26ರಂದು ಬಳ್ಳಾರಿ ಬಂದ್

‘ಐದು ತಾಲ್ಲೂಕಿನ ಜನರಷ್ಟೇ ವಿಭಜನೆಗೆ ವಿರೋಧ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 12:21 IST
Last Updated 19 ನವೆಂಬರ್ 2020, 12:21 IST

ಬಳ್ಳಾರಿ: ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸುವ ಕುರಿತು ಪರ–ವಿರುದ್ಧ ಚರ್ಚೆಗಳು ನಡೆಯುತ್ತಿರುವ ಬೆನ್ನಿಗೇ, ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ನ.26ರಂದು ಬಳ್ಳಾರಿ ಜಿಲ್ಲೆ ಬಂದ್‌ಗೆ ಕರೆ ನೀಡಿದೆ. ಅದಕ್ಕೂ ಮುನ್ನ, ವಿಭಜನೆ ನಿರ್ಧಾರವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ನ.23ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮುಖಂಡರಾದ ಕುಡುತಿನಿ ಶ್ರೀನಿವಾಸ್‌, ದರೂರು ಪುರುಷೋತ್ತಮಗೌಡ, ‘ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವುದಕ್ಕೆ ನಮ್ಮ ವಿರೋಧವಿದೆ. ಹಿಂದಿನ ವರ್ಷವೇ ಈ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿತ್ತು. ಎಲ್ಲ ಮುಖಂಡರು, ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿತ್ತು. ಈಗ ಏಕಾಏಕಿ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಿಯಲ್‌ ಎಸ್ಟೇಟ್‌: ‘ಜಿಲ್ಲೆಯನ್ನು ವಿಭಜಿಸಿದರೆ ಹೊಸಪೇಟೆಯಲ್ಲಿರುವ ತಮ್ಮ ಭೂಮಿಯ ದರ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ವಿಭಜನೆಯ ಪರ ನಿಂತಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಸಚಿವರ ಹುನ್ನಾರಕ್ಕೆ ಸಮಿತಿಯು ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ಹಿಂದಿನ ವರ್ಷ ವಿಭಜನೆಯನ್ನು ವಿರೋಧಿಸಿ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದಾಗ ಪಶ್ಚಿಮ ತಾಲ್ಲೂಕುಗಳಿಂದ ಸಂಪೂರ್ಣ ಬೆಂಬಲ ದೊರಕಿರಲಿಲ್ಲ. ಅಲ್ಲಿನ ಜನ ವಿಭಜನೆಯ ಪರವಾಗಿಯೇ ಇದ್ದಾರೆ. ಹೀಗಾಗಿ ಸಂಡೂರು, ಸಿರುಗುಪ್ಪ, ಕುರುಗೋಡು, ಕಂಪ್ಲಿಯಲ್ಲಿ ಬಂದ್‌ಗೆ ಬೆಂಬಲ ನೀಡುವಂತೆ ಅಲ್ಲಿನ ಸಂಘ–ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರನ್ನು ಕೋರುತ್ತೇವೆ. ಈಗಾಗಲೇ ಸಿರುಗುಪ್ಪದ ಮುಖಂಡರೊಡನೆ ಚರ್ಚಿಸಲಾಗಿದೆ’ ಎಂದು ಹೇಳಿದರು.

‘ವಿಭಜನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ ಮಾಹಿತಿ ದೊರಕುತ್ತಿದ್ದಂತೆಯೇ ಪ್ರತಿಭಟನೆ ನಡೆಸಲು ಆಗಲಿಲ್ಲ. ಸುಮ್ಮನೇ ಗಡಿಗಿ ಚೆನ್ನಪ್ಪ ಸರ್ಕಲ್‌ನಲ್ಲಿ ಹತ್ತು ಜನ ಸೇರಿ ಸಣ್ಣ ಪ್ರತಿಭಟನೆ ನಡೆಸಿದರೆ ಪ್ರಯೋಜನವಿಲ್ಲ ಎಂದು ಅರಿತುಕೊಂಡೇ ಒಂದು ವಾರದ ಬಳಿಕ ಜಿಲ್ಲಾಮಟ್ಟದ ಬಂದ್‌ಗೆ ಕರೆ ನೀಡಿದ್ದೇವೆ. ಅಷ್ಟರೊಳಗೆ ಸುಮಾರು 70ಕ್ಕೂ ಹೆಚ್ಚು ಸಂಘ–ಸಂಸ್ಥೆಗಳನ್ನು ಒಗ್ಗೂಡಿಸುತ್ತೇವೆ. ಜನಾಭಿಪ್ರಾಯವನ್ನೂ ರೂಪಿಸಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.

ಮುಖಂಡರಾದ ಮೋಹನ್‌ಕುಮಾರ್‌, ಟಪಾಲ್‌ ಗಣೇಶ್‌, ಚಾನಾಳ್‌ ಶೇಖರ್, ವಿಜಯಕುಮಾರ್, ಬಿಸ್ಲಳ್ಳಿ ಬಸವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.