ADVERTISEMENT

ಉದ್ಯಮಸ್ನೇಹಿ ತಾಣ –ಬೆಂಗಳೂರಿಗೂ ಸ್ಥಾನ: ಟಿ.ಎಂ. ವಿಜಯಭಾಸ್ಕರ್‌

125ನೇ ವರ್ಷದ ಸಂಭ್ರಮದಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 20:15 IST
Last Updated 31 ಜನವರಿ 2020, 20:15 IST
ವೊಲ್ವೊ ಗ್ರೂಪ್‌ ಇಂಡಿಯಾ ಕಂಪನಿಯ ಅಧ್ಯಕ್ಷ ಕಮಲ್‌ ಬಾಲಿ ಹಾಗೂ ಟಿ.ಎಂ. ವಿಜಯಭಾಸ್ಕರ್‌ ಹಸ್ತಲಾಘವ ಮಾಡಿದರು. ಸಂದೀಪ್‌ ಸಿಂಗ್, ಸಿಐಐ ನಿರ್ದೇಶಕ ಕೆ.ರಮೇಶ್‌, ಸಿಐಐ ಅಧ್ಯಕ್ಷ ಅಮನ್‌ ಚೌಧರಿ ಇದ್ದರು ಪ್ರಜಾವಾಣಿ ಚಿತ್ರ
ವೊಲ್ವೊ ಗ್ರೂಪ್‌ ಇಂಡಿಯಾ ಕಂಪನಿಯ ಅಧ್ಯಕ್ಷ ಕಮಲ್‌ ಬಾಲಿ ಹಾಗೂ ಟಿ.ಎಂ. ವಿಜಯಭಾಸ್ಕರ್‌ ಹಸ್ತಲಾಘವ ಮಾಡಿದರು. ಸಂದೀಪ್‌ ಸಿಂಗ್, ಸಿಐಐ ನಿರ್ದೇಶಕ ಕೆ.ರಮೇಶ್‌, ಸಿಐಐ ಅಧ್ಯಕ್ಷ ಅಮನ್‌ ಚೌಧರಿ ಇದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಅತ್ಯುತ್ತಮ ಉದ್ಯಮಸ್ನೇಹಿ ವಾತಾವರಣ ಹೊಂದಿರುವ ನಗರಗಳ ಪೈಕಿ ಬೆಂಗಳೂರು ಕೂಡ ಪ್ರಮುಖವಾದುದು ಎಂದು ವಿಶ್ವಬ್ಯಾಂಕ್‌ ಹೇಳಿದೆ. ದೇಶದಲ್ಲಿ ಈ ಮೊದಲು ಮುಂಬೈ ಮತ್ತು ದೆಹಲಿ ಮಾತ್ರ ಈ ಶ್ರೇಯಕ್ಕೆ ಪಾತ್ರವಾಗಿದ್ದವು’ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹೇಳಿದರು.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) 125ನೇ ವಾರ್ಷಿಕೋತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದ್ಯಮಸ್ನೇಹಿ ವಾತಾವರಣ ಅಥವಾ ವಹಿವಾಟು ಪೂರಕ ಪರಿಸರ ಕಲ್ಪಿಸಿದ ವಿಶ್ವದ ಅತ್ಯುತ್ತಮ ದೇಶಗಳ ಪಟ್ಟಿಯಲ್ಲಿ ಭಾರತವು ಕಳೆದ ವರ್ಷ 140ರಿಂದ 63ನೇ ಸ್ಥಾನಕ್ಕೇರಿದೆ. ಮುಂದಿನ ವರ್ಷ 50ರೊಳಗೆ ಸ್ಥಾನ ಪಡೆಯಲು ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯಸರ್ಕಾರವೂ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದರು.

‘ಈ ಪಟ್ಟಿ ತಯಾರಿಸುವ ವೇಳೆ ಕೈಗಾರಿಕೋದ್ಯಮಿಗಳು, ಹೂಡಿಕೆದಾರರ ಅಭಿಪ್ರಾಯವನ್ನು ಕೂಡ ವಿಶ್ವಬ್ಯಾಂಕ್‌ ಸಂಗ್ರಹಿಸುತ್ತದೆ. ಈ ನಿಟ್ಟಿನಲ್ಲಿ, ಸಿಐಐ ಜೊತೆಗೆ ಕೆಲಸ ಮಾಡಲು ರಾಜ್ಯಸರ್ಕಾರ ಉತ್ಸುಕವಾಗಿದ್ದು, ಇದೇ ವರ್ಷದ ನ.3ರಿಂದ 5ರವರೆಗೆ ರಾಜ್ಯದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಆಯೋಜಿಸಲಾಗುತ್ತಿದೆ’ ಎಂದರು.

ADVERTISEMENT

ಸಿಐಐ ಕರ್ನಾಟಕದ ಉಪಾಧ್ಯಕ್ಷ ಸಂದೀಪ್‌ ಸಿಂಗ್‌, ‘ದೇಶ ಕಟ್ಟುವ ಕಾರ್ಯದಲ್ಲಿ ಸಿಐಐ 125 ವರ್ಷಗಳಿಂದ ಕೆಲಸ ಮಾಡುತ್ತಿದೆ. ಸಮಾಜ, ಸಮುದಾಯದ ಅಭಿವೃದ್ಧಿಯ ಜೊತೆಗೆ ಆರ್ಥಿಕ ಪ್ರಗತಿಗೂ ಕೊಡುಗೆ ನೀಡುತ್ತಿದೆ’ ಎಂದರು.

‘ಸಣ್ಣ ಕೈಗಾರಿಕೆಗಳಿಗೆ ಆದ್ಯತೆ’

‘ಯಾವುದೇ ದೇಶ ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಸಾಧಿಸಿದೆ ಎಂದರೆ ಅಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗಿದೆ ಎಂದರ್ಥ. ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುವ ವಲಯವಿದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಜೊತೆಗೂ ಸಿಐಐ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ’ ಎಂದು ವಿಜಯಭಾಸ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.