ADVERTISEMENT

ಬೆಂಗಳೂರು– ಮೈಸೂರು ಸಂಚಾರ ಅವಧಿ 75 ನಿಮಿಷಕ್ಕೆ: ನಿತಿನ್ ಗಡ್ಕರಿ

ಅಕ್ಟೋಬರ್‌ಗೆ ಎನ್‌.ಎಚ್‌- 275 ವಿಸ್ತರಣಾ ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 20:24 IST
Last Updated 28 ಮಾರ್ಚ್ 2022, 20:24 IST
   

ನವದೆಹಲಿ: ಬೆಂಗಳೂರು– ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು 3 ಗಂಟೆಯ ಬದಲಿಗೆ ಕೇವಲ 75 ನಿಮಿಷಗಳಿಗೆ ತಗ್ಗಿಸುವ ಉದ್ದೇಶದೊಂದಿಗೆ ಆರಂಭಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ– 275ರ ವಿಸ್ತರಣಾ ಯೋಜನೆಯ ಕಾಮಗಾರಿಯು ಅಕ್ಟೋಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರದ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

‘ಬೆಂಗಳೂರು– ನಿಡಘಟ್ಟ– ಮೈಸೂರು ನಡುವಿನ ಒಟ್ಟು 117 ಕಿಲೋಮೀಟರ್ ಅಂತರದ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಾಗಿ ₹ 8,350 ಕೋಟಿ ವ್ಯಯಿಸಲಾಗಿದೆ. ಪಾರದರ್ಶಕವಾಗಿ ಮತ್ತು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಬದ್ಧತೆಯಾಗಿದೆ’ ಎಂದು ಅವರು ಸೋಮವಾರ ಸರಣಿ ಟ್ವೀಟ್‌ಗಳ ಮೂಲಕ ಹೇಳಿದ್ದಾರೆ.

ಹೆದ್ದಾರಿಯು 10 ಲೇನ್‌ಗೆ ವಿಸ್ತರಣೆಯಾಗಲಿದ್ದು, ಕರ್ನಾಟಕದ ಎರಡೂ ಪ್ರಮುಖ ನಗರಗಳ ನಡುವಿನ ಸಂಚಾರ ಅವಧಿಯನ್ನು ಕಡಿತಗೊಳಿಸಲಿದೆ. ಅಲ್ಲದೆ, ಸಂಪರ್ಕ ವೃದ್ಧಿಗೆ ಸಹಕಾರಿಯಾಗಲಿದೆ. ಈ ಮೂಲಕ ಈ ಭಾಗದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ಪ್ರಚೋದನೆ ನೀಡುತ್ತದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಅತ್ಯಾಧುನಿಕ ಮಾದರಿಯ ಈ ಯೋಜನೆಯು 8 ಕಿಲೋಮೀಟರ್ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಚಿಕ್ಕ ಸೇತುವೆಗಳು, 64 ಅಂಡರ್‌ ಪಾಸ್‌ಗಳು, 11 ಮೇಲ್ಸೇತುವೆಗಳು, 4 ರೋಡ್ ಓವರ್ ಬ್ರಿಡ್ಜ್‌ ಒಳಗೊಂಡಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 5 ಬೈಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ವಿವರ ನೀಡಿದ್ದಾರೆ.

ಅಧಿಕಾರಿಗಳಿಗೆ ಗಡ್ಕರಿ ಸೂಚನೆ:ರಾಷ್ಟ್ರೀಯ ಹೆದ್ದಾರಿಗಳು ಸಮರ್ಪಕ ರಸ್ತೆ ಸುರಕ್ಷತಾ ಕ್ರಮಗಳನ್ನು ಹೊಂದಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರದ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು ಹಾಗೂ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಚರ್ಚೆಗಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸಂಸತ್‌ ಸದಸ್ಯರ ಸಲಹಾ ಸಮಿತಿಯ ಮೊದಲ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಕೆಲವು ಸಲಹೆ ನೀಡಿದ್ದಾರೆ.

ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಸಾವಿನ ಸಂಖ್ಯೆಯ ಕುರಿತು ಸಮಿತಿಯಲ್ಲಿರುವ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಜಾಗೃತಿ ಕಾರ್ಯಕ್ರಮಗಳ ಮೂಲಕ ದೇಶದಾದ್ಯಂತ ರಸ್ತೆ ಅಪಘಾತ ಮತ್ತು ಸಾವು–ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ ಎಂದು ಕೋರಿದ್ದಾಗಿ ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಹೆದ್ದಾರಿಯಲ್ಲಿ ಸಂಭವಿಸುವ ಅಹಿತಕರ ಘಟನೆಗಳ ನಿಯಂತ್ರಣ, ಆಂಬುಲೆನ್ಸ್ ಮತ್ತು ಟ್ರಾಮಾ ಕೇರ್ ಸೌಲಭ್ಯ, ಚಾಲಕರ ಜಾಗರೂಕತೆಗಾಗಿ ಜಿಪಿಎಸ್ ವ್ಯವಸ್ಥೆ, ಅಪಘಾತ ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಣೆ, ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿ, ಪರಿಣಾಮಕಾರಿ ವಾಹನ ಚಾಲನಾ ತರಬೇತಿ ಹಾಗೂ ರಸ್ತೆ ಅಗಲೀಕರಣದ ಅಗತ್ಯದ ಕುರಿತೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸಮಿತಿ ಸದಸ್ಯರು ತಮ್ಮ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಇತರ ಏಜೆನ್ಸಿಗಳ ಮುಖ್ಯಸ್ಥರೊಂದಿಗೆ ನಿಯಮಿತವಾಗಿ ಸಭೆ ಆಯೋಜಿಸುವಂತೆ ಸಚಿವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.