ADVERTISEMENT

ಅರಮನೆ ಮೈದಾನ ಸ್ವಾಧೀನ ಮಸೂದೆಗೆ ಅಂಗೀಕಾರ

ಬಿಜೆಪಿ–ಜೆಡಿಎಸ್ ಸದಸ್ಯರ ವಿರೋಧ, ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 20:01 IST
Last Updated 6 ಮಾರ್ಚ್ 2025, 20:01 IST
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಬೆಂಗಳೂರು ಅರಮನೆ ಮೈದಾನ ಪ್ರದೇಶದ ಬಳಕೆ ಮತ್ತು ನಿಯಂತ್ರಣ ಅಧಿಕಾರವನ್ನು ರಾಜ್ಯ ಸರ್ಕಾರದ ಬಳಿಯೇ ಇಟ್ಟುಕೊಳ್ಳುವ ಉದ್ದೇಶದ ‘ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025’ ಕ್ಕೆ  ಪ್ರತಿಪಕ್ಷಗಳ ವಿರೋಧ ಮತ್ತು ಸಭಾತ್ಯಾಗದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು.

ಸುಗ್ರೀವಾಜ್ಞೆ ರೂಪದಲ್ಲಿದ್ದ ಮಸೂದೆಗೆ ಕೆಲ ಸಣ್ಣ ತಿದ್ದುಪಡಿಗಳೊಂದಿಗೆ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ವಿಧಾನಸಭೆಯಲ್ಲಿ ಮಂಡಿಸಿದರು.

ಬೆಂಗಳೂರು ಅರಮನೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪಿಗೆ ಅನುಸಾರ ಈಗಾಗಲೇ ನಷ್ಟ ಪರಿಹಾರ ಪಾವತಿಸಿದ್ದರೆ, ಸರ್ಕಾರದ ಕ್ರಮ ರಕ್ಷಿತವಾಗುವುದು. ಅಂದರೆ, 1996 ರಲ್ಲಿ ಅರಮನೆ ಮೈದಾನವನ್ನು ಸ್ವಾದೀನಕ್ಕೆ ತೆಗೆದುಕೊಂಡಾಗ ಪರಿಹಾರವಾಗಿ ಸರ್ಕಾರ ರಾಜಮನೆತನಕ್ಕೆ ₹11 ಕೋಟಿ ನೀಡಿತ್ತು. ಆ ಕ್ರಮವನ್ನು ರಕ್ಷಿಸುವುದು ತಿದ್ದುಪಡಿಯ ಉದ್ದೇಶ ಎಂದು ಪಾಟೀಲ ವಿವರಿಸಿದರು.

ADVERTISEMENT

ಅಲ್ಲದೇ, ಈ ಅಧಿನಿಯಮವು ಜಾರಿಗೆ ಬರುವುದಕ್ಕೆ ಮೊದಲು ಮತ್ತು ನ್ಯಾಯಾಲಯದ ತೀರ್ಪು ಅಥವಾ ಆದೇಶಕ್ಕೆ ಅನುಗುಣವಾಗಿ ಸರ್ಕಾರದ ತೀರ್ಮಾನದ ಪ್ರಕಾರ ನಷ್ಟ ಪರಿಹಾರ ಪಾವತಿಸಿದ್ದರೆ, ಮತ್ತೊಮ್ಮೆ ನಷ್ಟ ಪರಿಹಾರ ಪಾವತಿಸುವ ಅಗತ್ಯವಿಲ್ಲ. ಅಂದರೆ, ಈಗಾಗಲೇ ₹11 ಕೋಟಿ ಪರಿಹಾರ ಎಂದು ನಿಗದಿ ಮಾಡಿದ್ದರಿಂದ ಮತ್ತೆ ಪರಿಹಾರ ಮೊತ್ತ ಪರಿಷ್ಕರಣೆ ಮಾಡುವುದರಿಂದ ರಕ್ಷಣೆ ಪಡೆಯಲು ಈ ತಿದ್ದುಪಡಿ ಎಂದರು.

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ‘ರಾಜಮನೆತದವರು ಬಿಜೆಪಿ ಸಂಸದರಾದರು ಎಂಬ ಕಾರಣಕ್ಕೆ ದ್ವೇಷದಿಂದ ಈ ಮಸೂದೆ ತರಲಾಗಿದೆ.  ಮೈಸೂರು ರಾಜಮನೆತನ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನೂ ಯಾರೂ ಮರೆಯುವಂತಿಲ್ಲ. ನಿಮಗೇಕೆ ಬೆಂಗಳೂರು ಅರಮನೆ ಮೇಲೆ ಕಣ್ಣು’ ಎಂದು ಪ್ರಶ್ನಿಸಿದರು.

ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಅರಮನೆ ಮಾಲೀಕತ್ವದ ವಿಷಯ ಇತ್ಯರ್ಥವಾಗದೇ ಈ ಮಸೂದೆ ಮಂಡಿಸುವುದರಲ್ಲಿ ಅರ್ಥವಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನಂತೆ ಟಿಡಿಆರ್‌ ಪಾವತಿ ಮಾಡಿ ಎಂದು ಹೇಳಿದರು.

ಇದಕ್ಕೆ ಬಿಜೆಪಿಯ ಬಿ.ವೈ.ವಿಜಯೇಂದ್ರ, ಬೈರತಿ ಬಸವರಾಜ, ಆರಗಜ್ಞಾನೇಂದ್ರ  ಧ್ವನಿಗೂಡಿಸಿದರು. ಮಸೂದೆಯನ್ನು ಮತಕ್ಕೆ ಹಾಕುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದಾಗ, ಸರ್ಕಾರ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.