ADVERTISEMENT

ಕೊರೊನಾ| ರೋಗಿ ರಕ್ಷಣೆಗೆ ಎಲ್ಲಾ ಇದೆ, ಆದರೆ ವೈದ್ಯರಿಲ್ಲ: ವಿಡಿಯೋ ಮೂಲಕ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2020, 6:02 IST
Last Updated 6 ಜುಲೈ 2020, 6:02 IST
ಡಾ.ತಾಹ ಮತೀನ್ ಬೆಂಗಳೂರು
ಡಾ.ತಾಹ ಮತೀನ್ ಬೆಂಗಳೂರು   

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಐಸಿಯುನಲ್ಲಿ ಎಲ್ಲಾ ಸಿದ್ದತೆಗಳಿದ್ದರೂ ರೋಗಿಗಳನ್ನು ರಕ್ಷಿಸಲು ವೈದ್ಯರಿಲ್ಲದೆ ಪರದಾಡುತ್ತಿರುವುದನ್ನು ಆ ಆಸ್ಪತ್ರೆಯ ಎಂಡಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಹಲವರು ಸ್ಪಂದಿಸಿದ್ದಾರೆ. ಖಾಸಗಿ ಆಸ್ಪತ್ರೆಯ ಡಾ.ತಾಹ ಮತೀನ್ ಎಂಬುವರು ತಮ್ಮ ಆಸ್ಪತ್ರೆಯಲ್ಲಿ ಎದುರಿಸುತ್ತಿರುವ ಸಮಸ್ಯೆಯನ್ನು ವಿಡಿಯೋದಲ್ಲಿ ತೋಡಿಕೊಂಡಿದ್ದಾರೆ.

'ನಾನು ಎಚ್‌ಬಿಎಸ್ ಆಸ್ಪತ್ರೆ ಎಂಡಿ ಡಾ.ತಾಹ ಮತೀನ್, ನಾನು ಕೋವಿಡ್ ಐಸಿಯುನಲ್ಲಿದ್ದೇನೆ, ನಾನು ಬೆಳಿಗ್ಗೆ 7.30ಕ್ಕೆ ಬಂದೆ, ಈಗ 12.30 ಮಧ್ಯರಾತ್ರಿಯಾಯಿತು. ಆಸ್ಪತ್ರೆಯಲ್ಲಿ ನನಗೆ ಹಲವಾರು ದೂರವಾಣಿ ಕರೆಗಳು ಬರುತ್ತಿವೆ. ರೋಗಿಗಳು ನನಗೆ ಎಡಬಿಡದೆ ಕರೆ ಮಾಡುತ್ತಿದ್ದಾರೆ. ನನ್ನ ತಂದೆಗೆ, ನನ್ನ ಮಗಳಿಗೆ, ನನ್ನಸೋದರನಿಗೆ ಉಸಿರಾಟದ ತೊಂದರೆಯಿದೆ ಎಂದು ಕರೆ ಮಾಡುತ್ತಿದ್ದಾರೆ. ಆದರೆ, ಈ ಬೆಂಗಳೂರಿನಲ್ಲಿ ಒಂದು ಕೊಠಡಿಯನ್ನು ಹುಡುಕಲು ಸಾಧ್ಯವಾಗ್ತಾ ಇಲ್ಲ.

ADVERTISEMENT

'ನೀವು ನೋಡ್ತಾ ಇರಬಹುದು, ಇಲ್ಲಿ ನನ್ನ ಜೊತೆ ಶಿವ ಅನ್ನೋರು ಇದ್ದಾರೆ. ಯಾವುದೇ ವೈದ್ಯರು ಇಲ್ಲಿ ಬಂದು ಕೆಲಸ ಮಾಡಲು ಒಪ್ಪುತ್ತಿಲ್ಲ. ಹಾಸಿಗೆಗಳಿವೆ, ಆಕ್ಸಿಜನ್ ಇದೆ, ಎಲ್ಲಾ ವ್ಯವಸ್ಥೆ ಇದೆ, ವೆಂಟಿಲೇಟರ್‌ಗಳಿವೆ, ಅದಕ್ಕಿಂತ ಇನ್ನೂ 30 ಬೆಡ್ ಗಳಿವೆ. ಆದರೆ ಇಲ್ಲಿ ವೈದ್ಯರಿಲ್ಲ. ನಾನು ವಾಟ್ಸಪ್‌ನಲ್ಲಿ ಮನವಿ ಮಾಡಿದ್ದೇನೆ. ಆದರೆ, ಯಾರೂ ಸ್ಪಂದಿಸುತ್ತಿಲ್ಲ.

'ಕೆಲ ಸಮಯ ಸೈನಿಕರು ಮುಂದೆ ಬರ್ತಾರೆ, ಕೆಲಸ ಸಮಯ ಅಗ್ನಿಶಾಮಕದಳದ ಸಿಬ್ಬಂದಿ ಮುಂದೆ ಬರ್ತಾರೆ, ಇಂತಹ ಸಮಯದಲ್ಲಿ ಕೇವಲ 6 ಗಂಟೆಗಳ ಕಾಲ ಕೆಲಸ ಮಾಡಿ ವೈದ್ಯರೆ, ಇದು ವೈದ್ಯರಿಗೆ ತಮ್ಮ ಬದ್ಧತೆಯನ್ನು ತೋರಿಸುವ ಸಮಯ. ನೀವು ಮತ್ತು ನಾವು ವೈದ್ಯರು ಇಂತಹ ಸಮಯದಲ್ಲಿ ಮುಂದೆ ಬರಬೇಕಿದೆ. ಇಲ್ಲಿ ಯಾರದೊ ತಂದೆ, ಯಾರದೋ ತಾಯಿ, ಯಾರದೋ ಸೋದರ ಇದ್ದಾರೆ.
ಇಂತಹ ಸಂದರ್ಭ ನಾವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಿದೆ. ನಾವು ಎಲ್ಲಿಯವರೆಗೆ ಬದುಕುತ್ತೇವೆ ಎಂಬ ವಿಷಯ ಮುಖ್ಯವಲ್ಲ ನಾವು ಹೇಗೆ ಬದುಕುತ್ತೇವೆ ಎಂಬ ವಿಷಯ ಮುಖ್ಯ. ಬನ್ನಿ ರಕ್ಷಿಸೋಣ ಎಂದು ಮನವಿ ಮಾಡಿದ್ದಾರೆ'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.