ADVERTISEMENT

ಸ್ಥಳೀಯರಿಂದ ಜಾಗತಿಕ ಸೇವೆ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 15:59 IST
Last Updated 3 ಸೆಪ್ಟೆಂಬರ್ 2024, 15:59 IST
ಜಿಐಎ ಸದಸ್ಯರ ಸಭೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದರು
ಜಿಐಎ ಸದಸ್ಯರ ಸಭೆಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದರು   

ಬೆಂಗಳೂರು: ‘ಸ್ಥಳೀಯ ಮಟ್ಟದಲ್ಲಿ ನಿಂತು ಜಾಗತಿಕ ಮಟ್ಟದ ಸೇವೆ ಒದಗಿಸುವುದಕ್ಕೆ ಬೆಂಗಳೂರು ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಇದರ ವಿಸ್ತರಣೆಯಾಗಿಯೇ ಸ್ಥಳೀಯ ಮತ್ತು ಜಾಗತಿಕ ಪ್ರತಿಭೆಗಳನ್ನು ಒಂದೇ ವೇದಿಕೆ ಅಡಿ ತರಲು ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಆಯೋಜಿಸಲಾಗುತ್ತಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಇದೇ ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಪೂರ್ವಭಾವಿಯಾಗಿ ಮಂಗಳವಾರ ನಗರದಲ್ಲಿ ಆಯೋಜಿಸಲಾಗಿದ್ದ ‘ಗ್ಲೋಬಲ್‌ ಇನ್ನೋವೇಷನ್ ಅಲಯನ್ಸ್‌’ನ (ಜಿಐಎ) ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ಮಾತ್ರವಲ್ಲ, ಕರ್ನಾಟಕವೂ ತಂತ್ರಜ್ಞಾನ ಆಧಾರಿತ ಸಹಕಾರ ಮತ್ತು ಸಹಯೋಗಕ್ಕೆ ಯಾವತ್ತೂ ಒತ್ತು ನೀಡಿದೆ. ಅಂತಹ ಅವಕಾಶವನ್ನು ಈ ಶೃಂಗಸಭೆ ಮಾಡಿಕೊಡಲಿದೆ. ಇದರಲ್ಲಿ ಭಾಗಿಯಾಗುವ ಮೂಲಕ ಅದನ್ನು ಬಳಸಿಕೊಳ್ಳಬೇಕು’ ಎಂದು ಜಿಐಎ ಪ್ರತಿನಿಧಿಗಳನ್ನು ಅವರು ಶೃಂಗಸಭೆಗೆ ಆಹ್ವಾನಿಸಿದರು.

ADVERTISEMENT

‘ಸ್ಥಳೀಯರು ಮತ್ತು ಕನ್ನಡಿಗರಲ್ಲಿ ಉತ್ಕೃಷ್ಟ ಮಟ್ಟದ ಕೌಶಲ ಬೆಳೆಸಿ, ಜಾಗತಿಕ ಸೇವೆಯನ್ನು ಒದಗಿಸುವ ಉದ್ದೇಶದಿಂದಲೇ ಖಾಸಗಿ ಕ್ಷೇತ್ರದಲ್ಲೂ ಸ್ಥಳೀಯರಿಗೆ ಮೀಸಲಾತಿ ಒದಗಿಸುವ ಕ್ರಮ ತೆಗೆದುಕೊಳ್ಳಲಾಗಿತ್ತು’ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನವೋದ್ಯಮಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಒದಗಿಸುತ್ತಿರುವ ಸಹಕಾರ, ನೆರವು ಮತ್ತು ವಿನಾಯತಿಗಳು ಹಾಗೂ ಈ ಕ್ಷೇತ್ರಗಳಲ್ಲಿ ರಾಜ್ಯದ ಸಾಧನೆಗಳನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್ ಅವರು ಜಿಐಎ ಪ್ರತಿನಿಧಿಗಳಿಗೆ ವಿವರಿಸಿದರು.

ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾಗಿಯಾಗಲು ಜಿಐಎ ಸದಸ್ಯರಿಗೆ ಆಹ್ವಾನ ತಂತ್ರಜ್ಞಾನ, ಸಂಶೋಧನೆಯಲ್ಲಿ ಮುಂಚೂಣಿ 33 ರಾಷ್ಟ್ರಗಳ ಒಕ್ಕೂಟ
‘ಲಹರ್‌ ಸಿಂಗ್‌ ಬ್ರೋಕರೇಜ್‌ ವಿಫಲ’
‘ಬಿಜೆಪಿಯ ಲಹರ್‌ ಸಿಂಗ್‌ ಅವರದ್ದು ‘ಪೊಲಿಟಿಕಲ್ ಬ್ರೋಕರೇಜ್‌ ಕೆಲಸ’. ಈ ಕೆಲಸಕ್ಕೆ ಕನ್ನಡದಲ್ಲೇ ಒಂದು ಹೆಸರಿದೆ. ಆದರೆ ಅದನ್ನು ನಾನು ಹೇಳುವುದಿಲ್ಲ. ಕರ್ನಾಟಕದಲ್ಲೂ ಆ ಕೆಲಸ ಮಾಡಲು ಅವರು ಯತ್ನಿಸಿದರು. ಆದರೆ ಇಲ್ಲಿ ಅದು ನಡೆಯಲಿಲ್ಲ. ತಾನು ಸಕ್ರಿಯವಾಗಿದ್ದೇನೆ ಎಂದು ಬಿಜೆಪಿ ವರಿಷ್ಠರಿಗೆ ತೋರಿಸಿಕೊಳ್ಳಲು ಕಾಂಗ್ರೆಸ್‌ ನಾಯಕರ ವಿರುದ್ಧ ದೂರು ನೀಡುವ ಮತ್ತು ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ತಮ್ಮ ವಿರುದ್ಧ ಲಹರ್ ಸಿಂಗ್‌ ಅವರು ಮಾಡಿರುವ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ ಪ್ರಿಯಾಂಕ್‌ ‘ಇಲ್ಲಸಲ್ಲದ ಆರೋಪ ಮಾಡುವವರ ವಿರುದ್ಧ ನಮ್ಮ ಕುಟುಂಬ ಮಾನನಷ್ಟ ಮೊಕದ್ದಮೆ ಹೂಡಲಿದೆ. ಹಲವು ದಿನಗಳ ಹಿಂದೆ ಅವರು ಸರ್ಕಾರದ ವಿರುದ್ಧ ಹತ್ತಾರು ಆರೋಪಗಳನ್ನು ಮಾಡಿದ್ದರು. ಈಗ ಆ ಆರೋಪಗಳೆಲ್ಲಾ ಎಲ್ಲಿ ಹೋದವು’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.