ADVERTISEMENT

ಕಲಿಸುವ ಛಲವೇ ಹರ್ಷಿಯಾ ಟೀಚರ್‌ಗೆ ಕಣ್ಣು

ಪ್ರಜಾವಾಣಿ ವಿಶೇಷ
Published 5 ಸೆಪ್ಟೆಂಬರ್ 2018, 13:27 IST
Last Updated 5 ಸೆಪ್ಟೆಂಬರ್ 2018, 13:27 IST
   

ಬಂಗಾರಪೇಟೆ (ಕೋಲಾರ ಜಿಲ್ಲೆ): ಸಾಧನೆಗೆ ಅಂಗವೈಕಲ್ಯ ಎಂದಿಗೂ ಅಡ್ಡಿಯಾಗದು, ಸತತ ಪರಿಶ್ರಮದೊಂದಿಗೆ, ಗುರಿಯ ಕಡೆ ಹೆಜ್ಜೆ ಇರಿಸಿದರೆ ಅಂದುಕೊಂಡಿದನ್ನು ಸುಲಭವಾಗಿ ಸಾಧಿಸಬಹುದು ಎಂಬುದಕ್ಕೆ ಅಂಧ ಶಿಕ್ಷಕಿ ಹರ್ಷಿಯಾ ಬಾನು ಸಾಕ್ಷಿಯಾಗಿದ್ದಾರೆ. ಶೇ 75 ರಷ್ಟು ಅಂಧತ್ವ ಹೊಂದಿರುವ ಹರ್ಷಿಯಾ ಬಾನು ಬಂಗಾರಪೇಟೆಯ ಆದರ್ಶ ವಿದ್ಯಾಲಯದಲ್ಲಿ ಮಾದರಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಬಾಲ್ಯದಿಂದಲೂ ಕಷ್ಟಗಳಲ್ಲೇ ಬೆಳೆದ ಹರ್ಷಿಯಾ ಸಾಮಾನ್ಯ ಶಾಲಾ–ಕಾಲೇಜುಗಳಲ್ಲೇ ಶಿಕ್ಷಣ ಪೂರೈಸಿ ಈ ಎತ್ತರಕ್ಕೆ ಬೆಳೆದಿರುವುದು ಶ್ಲಾಘನೀಯ. ‘ಓದುವಾಗ ಮತ್ತು ವೃತ್ತಿ ಜೀವನದ ಆರಂಭದಲ್ಲಿ ಅನುಭವಿಸಿದ ಸಂಕಷ್ಟಗಳೇ ನನ್ನ ಗೆಲುವಿನಸೂತ್ರಗಳು’ ಎಂದು ಹರ್ಷಿಯಾ ಬಾನು ಹೇಳುತ್ತಾರೆ.ಶಿಕ್ಷಕರ ದಿನಾಚರಣೆಯಂದು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬದುಕಿನ ಹಾದಿಯನ್ನುಹರ್ಷಿಯಾ ಬಾನು ನೆನಪಿಸಿಕೊಂಡಿದ್ದು ಹೀಗೆ...

ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಶಿಕ್ಷಕಿ ಹರ್ಷಿಯಾ ಬಾನು

ನಿಮಗೆ ಶಿಕ್ಷಕಿಯಾಗಬೇಕು ಎಂದು ಅನಿಸಿದ್ದು ಏಕೆ?

ನಾನು ಶಿಕ್ಷಕಿಯಾಗಬೇಕು ಎಂದು ತಾಯಿ ಆಸೆಪಟ್ಟಿದ್ದರು. ಓದು-ಬರಹ ಕಲಿಯಲು ಕಷ್ಟ ಎನಿಸಿದಾಗಲೆಲ್ಲಾಅಮ್ಮನ ಆಸೆ ನೆನಪಾಗುತ್ತಿತ್ತು. ಅದನ್ನು ಈಡೇರಿಸುವ ನನ್ನ ಜವಾಬ್ದಾರಿ ಎನಿಸಿತ್ತು.

ADVERTISEMENT

ಆರಂಭದ ದಿನಗಳಲ್ಲಿ ಕಲಿಕೆ ಹೇಗಿತ್ತು?

ಮೊದಲು ಸಾಮಾನ್ಯ ವಿದ್ಯಾರ್ಥಿಗಳು ಓದುವ ಶಾಲೆಗಳಿಗೇನನ್ನನ್ನುಸೇರಿಸಿದ್ದರು. ಮಂದ ದೃಷ್ಟಿಯ ಕಾರಣ ಕಪ್ಪುಹಲಗೆಯ ಅಕ್ಷರಗಳು ಕಾಣುತ್ತಿರಲಿಲ್ಲ.ಶಿಕ್ಷಕರು ನಿಮ್ಮ ಮಗಳನ್ನು ಅಂಧ ಮಕ್ಕಳ ಶಾಲೆಗೆ ಸೇರಿಸಿ, ಅವಳ ಭವಿಷ್ಯ ಉಜ್ವಲವಾಗುತ್ತದೆ ಎಂದುಸಲಹೆ ಕೊಟ್ಟರು. ಆಗ ನನ್ನ ಪೋಷಕರು ’ಮಗಳು ನಮ್ಮ ಕಣ್ಣ ಮುಂದೆ ಬೆಳೆಯಬೇಕು. ಅವಳನ್ನು ನೋಡಿ ನಾವು ಖುಷಿಪಡಬೇಕು. ಕಷ್ಟವೋ ಸುಖವೋ ಮಗಳು ಜೊತೆಯಲ್ಲೇ ಇರಲಿ’ ಎಂದು ಹೇಳಿದ್ದರು. ನಾನು ಸಾಮಾನ್ಯ ಶಾಲೆಗಳಲ್ಲಿಯೇ ಕಲಿಕೆ ಮುಂದುವರಿಸಿದೆ.

ಕಲಿಕೆಯ ಸಂದರ್ಭ ಎದುರಾದಅಡ್ಡಿ ಆತಂಕಗಳು ಏನು? ಅವನ್ನು ಹೇಗೆ ನಿವಾರಿಸಿಕೊಂಡಿರಿ?

ಶಿಕ್ಷಕರುಬೋರ್ಡ್‌ಮೇಲೆ ಬರೆಯುತ್ತಿದ್ದ ಅಕ್ಷರಗಳು ಸರಿಯಾಗಿ ಕಾಣುತ್ತಿರಲಿಲ್ಲ. ಸಹಪಾಠಿಗಳು ಮತ್ತುಹಿರಿಯ ವಿದ್ಯಾರ್ಥಿಗಳ ಬಳಿ ಹೇಳಿಸಿಕೊಂಡು ಕಲಿಯತೊಡಗಿದೆ. 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಫೇಲಾಗಿದ್ದೆ. ಆದರೂ ವಿಶ್ವಾಸ ಕಳೆದುಕೊಳ್ಳದೆ ಮತ್ತೆ ಕಠಿಣ ಪರಿಶ್ರಮದಿಂದ ಓದಿ ಪಾಸಾದೆ. ಪ್ರೌಢಶಾಲೆಯಲ್ಲಿ ಆಟದ ಅವಧಿ ಬಂದಾಗ ಶಿಕ್ಷಕರ ಬಳಿ ಹೋಗಿ ಗಣಿತದ ಲೆಕ್ಕಗಳು, ವಿಜ್ಙಾನದ ಚಿತ್ರಗಳು, ಸಮಾಜ ವಿಜ್ಙಾನದ ಭೂಪಟಗಳನ್ನು ಅಭ್ಯಾಸ ಮಾಡುತ್ತಿದ್ದೆ. ಶಾಲೆಯಲ್ಲಿ ನಡೆದ ಕಹಿ ಘಟನೆಗಳನ್ನು ಮನೆಯಲ್ಲಿ ಹೇಳುತ್ತಿರಲಿಲ್ಲ. ಅವರು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿಬಿಡುವರೋ ಎಂದು ಭಯವಾಗುತ್ತಿತ್ತು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣಳಾದೆ.

ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯಾದ ಬಗೆ?

ಪಿಯುಸಿಯಲ್ಲಿ ವಿಜ್ಙಾನ ಕಲಿಯಬೇಕು ಎಂಬ ಆಸೆ ಇತ್ತು. ಆದರೆ ದೃಷ್ಟಿದೋಷದಿಂದಾಗಿ ವಿಜ್ಞಾನ ವಿಭಾಗ ಸೇರಲು ಸಾಧ್ಯವಾಗಲಿಲ್ಲ. ಪದವಿಯಲ್ಲಿ ಕನ್ನಡ ಸಾಹಿತ್ಯ, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ಅಭ್ಯಾಸ ಮಾಡಿದೆ. ಪದವಿಯ ಬಳಿಕ ಬಿ.ಇಡಿಗೆ ಸೇರಿ ಯಶಸ್ವಿಯಾಗಿ ಶಿಕ್ಷಕರ ತರಬೇತಿ ಮುಗಿಸಿದೆ.ವಿಶಿಷ್ಟಕಲಿಕೋಪಕರಣಗಳನ್ನು ಬಳಸಿ ಪಾಠ ಮಾಡುವುದನ್ನು ಅಭ್ಯಾಸ ಮಾಡಿಕೊಂಡೆ. ಶಿಕ್ಷಣ ಮುಗಿದ ಬಳಿಕ ಯಾವುದೇ ಖಾಸಗಿ ಶಾಲೆಯವರೂ ನನಗೆ ಅವಕಾಶ ಕೊಡಲಿಲ್ಲ. ಅರಸೀಕೆರೆಯ ಟ್ಯುಟೊರಿಯಲ್‌ನಲ್ಲಿಕೆಲಸ ಮಾಡುತ್ತಿದ್ದೆ. ಈ ವೇಳೆ ಸರ್ಕಾರಿ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಿದೆ. ಸಿಇಟಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದೆ. ಇದೀಗ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ.

ಪಾಠ ಮಾಡುವಾಗ ಎದುರಾದ ತೊಂದರೆಗಳು?

ಪಾಠ ಮಾಡುವಾಗ ಸಾಕಷ್ಟು ತೊಂದರೆಗಳು ಎದುರಾದವು. ಪುಸ್ತಕದಲ್ಲಿ ಅಕ್ಷರಗಳು ಸರಿಯಾಗಿ ಕಾಣುತ್ತಿರಲಿಲ್ಲ, ಹಾಗಾಗಿ ಮನೆಯಲ್ಲಿ ಪೂರ್ಣಪಾಠವನ್ನು ಬಾಯಿಪಾಠ ಮಾಡಿಕೊಂಡು ತರಗತಿ ಬರುವುದನ್ನು ರೂಢಿಸಿಕೊಂಡೆ. ಎಲ್ಲಿಗೆ ನಿಲ್ಲಿಸಿದರೆಪುಟ ಮುಕ್ತಾಯವಾಗುತ್ತದೆ ಎಂಬುದನ್ನೂ ಸಹ ನೆನಪಿಟ್ಟುಕೊಂಡು ಪಾಠ ಮಾಡುತ್ತಿದೆ. ಕನ್ನಡ ವ್ಯಾಕರಣವನ್ನು ಚಾರ್ಟ್‌ ಮಾಡಿ ಬೋಧಿಸುವ ಪ್ರಯೋಗ ಮಾಡಿದೆ. ಇದು ಆಕರ್ಷಕವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಇಷ್ಟವಾಯಿತು. ಇದು ಶಾಲೆಯ ಫಲಿತಾಂಶದ ಮೇಲೆಯೂ ಪ್ರಭಾವ ಬೀರಿರುವುದು ಖುಷಿ ಸಂಗತಿ.

ಅಂಗವಿಕಲರಿಗೆ ಮತ್ತು ವಿದ್ಯಾರ್ಥಿಗಳಿಗೆ ಏನು ಹೇಳಲು ಬಯಸುವಿರಿ?

ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗದು. ಅಂಗವಿಕಲರುಅನುಕಂಪ ಬಯಸಬಾರದು. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾಭಿಮಾನಿಯಾಗಿ ಮತ್ತು ಗೌರವಯುತವಾಗಿ ಜೀವನ ನಡೆಸಬೇಕು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರೆಕ್ರೀಯಾಶೀಲತೆ ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.