ADVERTISEMENT

ತುಮಕೂರಿನ ಅಪ್ಕಾನ್‌ ಕ್ರಷರ್‌ ಕಂಪನಿಯ ₹ 13.87 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 17:01 IST
Last Updated 7 ಫೆಬ್ರುವರಿ 2023, 17:01 IST
   

ಬೆಂಗಳೂರು: ಸುಳ್ಳು ಲೆಕ್ಕಪತ್ರ ಮತ್ತು ಫೋರ್ಜರಿ ದಾಖಲೆಗಳನ್ನು ಸಲ್ಲಿಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿದ್ದ ಆರೋಪ ಎದುರಿಸುತ್ತಿರುವ ತುಮಕೂರಿನ ಅಪ್ಕಾನ್‌ ಕ್ರಷರ್‌ ಕಂಪನಿಗೆ ಸೇರಿದ ₹ 13.87 ಕೋಟಿ ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

₹ 10 ಲಕ್ಷ ಮೌಲ್ಯದ ದಾಸ್ತಾನು ಮಾತ್ರ ಇದ್ದರೂ, ₹ 28.68 ಕೋಟಿ ಮೌಲ್ಯದ ಜೆಲ್ಲಿ ಮತ್ತಿತರ ವಸ್ತುಗಳ ದಾಸ್ತಾನು ಇದೆ ಎಂದು ಸುಳ್ಳು ಲೆಕ್ಕಪತ್ರ ಸಲ್ಲಿಸಲಾಗಿತ್ತು. ಅದರ ಆಧಾರದಲ್ಲಿ 2016ರ ಫೆಬ್ರುವರಿ 23ರಿಂದ 2017ರ ಅಕ್ಟೋಬರ್‌ 16ರವರೆಗೆ ಅಪ್ಕಾನ್‌ ಕಂಪನಿಗೆ ₹ 26 ಕೋಟಿ ನಗದು ಸಾಲ ಮತ್ತು ₹ 1.09 ಕೋಟಿ ವಾಹನ ಸಾಲ ಮಂಜೂರು ಮಾಡಲಾಗಿತ್ತು. ₹ 13.87 ಕೋಟಿಯಷ್ಟು ಸಾಲವನ್ನು ಕಂಪನಿ ಬಳಸಿಕೊಂಡಿತ್ತು.

ಬ್ಯಾಂಕ್‌ ಅಧಿಕಾರಿಗಳು ಸಲ್ಲಿಸಿದ್ದ ದೂರು ಆಧರಿಸಿ 202ರಲ್ಲಿ ಎಫ್‌ಐಆರ್‌ ದಾಖಲಿಸಿದ್ದ ಸಿಬಿಐ, ತನಿಖೆ ನಡೆಸಿತ್ತು. ಕಂಪನಿಯ ಪ್ರವರ್ತಕರು ಮತ್ತು ನಿರ್ದೇಶಕರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಬಳಿಕ ಇ.ಡಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು.

ADVERTISEMENT

‘ಸುಳ್ಳು ಲೆಕ್ಕಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸದೇ ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಕಂಪನಿಯ ಪಾಲುದಾರರ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡು ಅನ್ಯ ಉದ್ದೇಶಕ್ಕೆ ಬಳಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ಕಾನ್‌ ಕ್ರಷರ್‌ ಕಂಪನಿ ಹಾಗೂ ಅದರ ಪಾಲುದಾರರಿಗೆ ಸೇರಿದ ಎರಡು ಸ್ಥಿರಾಸ್ತಿಗಳು, ಐದು ವಾಹನಗಳು ಸೇರಿದಂತೆ ₹ 13.87 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.