ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯಿದೆ ವಿರೋಧಿ ಕವಿತೆ ವಾಚಿಸಿದ ಸಿರಾಜ್ ಬಿಸರಳ್ಳಿ ಹಾಗೂ ಅದನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದ ರಾಜಭಕ್ಷಿ ಅವರನ್ನು ಬಂಧಿಸಿದ ಪ್ರಕರಣ ಆಘಾತಕಾರಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ವ್ಯಕ್ತಿಯ ತೇಜೋವಧೆ ಹಾಗೂ ಚಾರಿತ್ರ್ಯಹರಣ ಮಾಡುವ ಬರಹಗಳಾಗಿದ್ದರೆ ಸಂಬಂಧಿಸಿದವರು ಮಾನಹಾನಿ ಪ್ರಕರಣ ಹೂಡಬಹುದು. ಸರ್ಕಾರವೊಂದರ ನೀತಿ ನಿಲುವುಗಳ ವಿರೋಧವು ದೇಶವಿರೋಧಿಯಾಗುವುದಿಲ್ಲ. ಜನಸಂಘದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕವಿ ಗೋಪಾಲಕೃಷ್ಣ ಅಡಿಗರು ನೆಹರೂ ಬದುಕಿದ್ದಾಗಲೇ ಅವರನ್ನು ವಿರೋಧಿಸಿ, ವಿಡಂಬಿಸಿ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಕವಿತೆ ಬರೆದಿದ್ದರು. ಯಾರೂ ಮೊಕದ್ದಮೆ ಹೂಡದೇ ಇರುವ ಸಹಿಷ್ಣು ವಾತಾವರಣ ಅಂದು ಇತ್ತು. ಈಗ ಇಂತಹ ವಾತಾವರಣ ಇಲ್ಲದಾಗುತ್ತಿರುವುದು ಆತಂಕದ ವಿಷಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಕೆಲವು ರಾಜಕಾರಣಿಗಳು ಮೋದಿ, ಅಮಿತ್ ಶಾ ಅವರನ್ನು, ಇನ್ನು ಕೆಲವರು ಸೋನಿಯಾ, ರಾಹುಲ್ ಅವರನ್ನು ಬೀದಿಬೀದಿಗಳಲ್ಲಿ ಬಾಯಿಗೆ ಬಂದಂತೆ ಅಸಂಸದೀಯ ಭಾಷೆಯಲ್ಲಿ ನಿಂದಿಸಿದರೂ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ವರ್ಷದ ಹಿಂದೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನ ಸುಟ್ಟು ಅಂಬೇಡ್ಕರ್ ಅವರಿಗೆ ಧಿಕ್ಕಾರ ಕೂಗಿದವರ ವಿರುದ್ಧ ಯಾವ ಕ್ರಮ ಜರುಗಿಸಲಾಯಿತೋ ಗೊತ್ತಿಲ್ಲ. ಗಾಂಧಿ ಚಿತ್ರಕ್ಕೆ ಗುಂಡು ಹಾರಿಸಿದವರು ಬಂಧನಕ್ಕೆ ಒಳಗಾಗದಿರುವುದು ವಿಪರ್ಯಾಸ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.