ADVERTISEMENT

ದುಷ್ಟ ಸಂಹಾರದಿಂದ ರಾಜ್ಯ–ಪಕ್ಷಕ್ಕೆ ಒಳೆಯದಾಗುತ್ತದೆ: ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 11:36 IST
Last Updated 30 ಜೂನ್ 2021, 11:36 IST
ಶಾಸಕ ಬಸನಗೌಡ ಪಾಟೀಲ ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು: ‘ದುಷ್ಟರ ಸಂಹಾರ ಆಗಬೇಕು ಅದರಿಂದ ದೇಶ, ರಾಜ್ಯ ಮತ್ತು ಪಕ್ಷಕ್ಕೆ ಒಳ್ಳಯದಾಗುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪರೋಕ್ಷವಾಗಿ ತಮ್ಮ ರಾಜಕೀಯ ವಿರೋಧಿಗಳ ಮೇಲೆ ಹರಿಹಾಯ್ದಿದ್ದಾರೆ.

ಆದಿಲ್‌ಶಾಹಿ, ಟಿಪ್ಪು, ಮೊಗಲ್‌ ಮನೆತನ ಮೆರೆದಾಡಿ ನಾಶ ಆಗಿ ಹೋಯಿತಲ್ಲ. ಅದೇ ರೀತಿ ಎಂದು ಅವರು ಬುಧವಾರ ಸುದ್ದಿಗಾರರ ಜತೆ ಮಾತನಾಡಿ ಹೇಳಿದರು.

ಏನೇನೋ ಮಾಡ್ತಾರೆ, ಅದರಿಂದ ಮುಂದೆ ಪರಿಣಾಮ ಅನುಭವಿಸಬೇಕಾಗುತ್ತದೆ. ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಿಂದೆ ಜೈಲಿಗೆ ಹೋದ ಉದಾಹರಣೆ ಇದೆಯಲ್ಲ. ಮುಂದೆ ಆ ರೀತಿ ಆಗಬಾರದು ಎಂಬುದಷ್ಟೇ ನಮ್ಮ ಕಳಕಳಿ ಎಂದು ತಿಳಿಸಿದರು.

ADVERTISEMENT

ಪಕ್ಷದ ವರಿಷ್ಠರು ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ವಿಶ್ವಾಸವಿದೆ. ಮೋದಿಯಿಂದಲೇ ಭಾರತದ ಭವಿಷ್ಯ ನಿರ್ಮಾಣ ಸಾಧ್ಯ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ದುಷ್ಟರಿಗೆ ಒಂದು ಕಾಲ ಇದ್ದೇ ಇರುತ್ತದೆ. ವೀರಶೈವ– ಲಿಂಗಾಯತ ರಾಜಕೀಯ ಬ್ರಿಗೇಡ್‌ನಲ್ಲಿ ವಿಜಯೇಂದ್ರ ಅವರ ಏಜೆಂಟ್‌ಗಳು ಇದ್ದಾರೆ ಎಂದೂ ಯತ್ನಾಳ್‌ ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌ ಕರ್ನಾಟಕಕ್ಕೆ ಬಂದಾಗ ಅದರ ಫಲಿತಾಂಶ ಏನು ಎಂಬುದು ಗೊತ್ತಿತ್ತು. ವಿಮಾನ ನಿಲ್ದಾಣದಲ್ಲಿ ಬಂದು ಇಳಿದಾಗ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದರು. ಹೋಗುವಾಗಲೂ ಅದೇ ಮಾತು ಹೇಳಿದ್ದರು. ಸೂರ್ಯ–ಚಂದ್ರ ಇರುವಂತೆ ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳಿದರು.

ಕುರ್ಚಿ ಉಳಿಸಲು ಅವರು ವ್ಯವಸ್ಥೆ ಮಾಡುತ್ತಾರೆ. ವರಿಷ್ಠರಿಗೆ ನಾವು ಯಾವುದೇ ದೂರು ಕೊಡುವ ಅಗತ್ಯವಿಲ್ಲ. ಗುಪ್ತಚರ ವಿಭಾಗ, ಐಎಎಸ್‌–ಐಪಿಎಸ್‌ ಅಧಿಕಾರಿಗಳು, ಶಾಸಕರು ಮತ್ತು ಕಾರ್ಯಕರ್ತರು ಇದ್ದಾರೆ. ಅವರಲ್ಲಿ ಒಂದು ಮಾತು ಕೇಳಿದರೆ ಸಾಕು ಗೊತ್ತಾಗುತ್ತದೆ. ನಾಯಕತ್ವ ತೆಗೆಯದೇ ಇದ್ದರೆ ಬಿಜೆಪಿ ಕರ್ನಾಟಕದಲ್ಲಿ ಮುಗಿದು ಹೋಗುತ್ತದೆ ಎನ್ನುತ್ತಾರೆ ಎಂದರು.

ಪಂಚಮಸಾಲಿ ಹೋರಾಟದಲ್ಲಿ ನಗ್ನ ಪ್ರದರ್ಶನ ಮಾಡಿದ ರಾಜಕಾರಣಿ ಈಗ ಸಂಪೂರ್ಣ ನಗ್ನರಾಗಿದ್ದಾರೆ. ಈ ಹೋರಾಟವನ್ನು ಒಬ್ಬ ಸಚಿವ ಮತ್ತು ಉದ್ಯಮಿ ತಮ್ಮ ರಾಜಕೀಯ ಉಪಯೋಗಕ್ಕೆ ಬಳಕೆ ಮಾಡಿದ್ದಾರೆ ಎಂದು ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ಹರಿಹಾಯ್ದರು.

ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ನನ್ನ ಭೇಟಿಯಲ್ಲಿ ಯಾವುದೇ ರಾಜಕೀಯ ಇರಲಿಲ್ಲ. ಯೋಗೇಶ್ವರ್‌ ಪರೀಕ್ಷೆ ಬರೆದಿರುವುದಾಗಿ ಹೇಳಿದ್ದಾರೆ. ನಾನಂತೂ ಯಾವುದೇ ಪರೀಕ್ಷೆ ಬರೆದಿಲ್ಲ. ಯೋಗೇಶ್ವರ್‌ ದೆಹಲಿಯಲ್ಲಿ ಯಾವ ಉತ್ತರ ಪತ್ರಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ಕಾಗದದ ಉತ್ತರವೋ ಬೇರೆ ಏನಾದರೂ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದು ಯತ್ನಾಳ್‌ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.