ADVERTISEMENT

ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 15:49 IST
Last Updated 22 ಫೆಬ್ರುವರಿ 2024, 15:49 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೆಂಗಳೂರು: ‘ಸರ್ವ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಬಿಜೆಪಿ ಅರವಿಂದ ಬೆಲ್ಲದ ಮಾತನಾಡುವಾಗ ಮಧ್ಯ ಪ್ರವೇಶಿಸಿದ ಯತ್ನಾಳ್‌ ಅವರು ಪಿಎಸ್‌ಐ ನೇಮಕಾತಿ ಹಗರಣ ಮತ್ತು ಕಾಂಗ್ರೆಸ್ ಅವಧಿಯ ಶೇ 40 ಕಮಿಷನ್‌ ಆರೋಪವನ್ನು ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ಪಿಎಸ್‌ಐ ತನಿಖೆಗೆ ಸಾಕ್ಷಿ ಕೊಡಿ ಎಂದರೆ ಹೋಗಲೇ ಇಲ್ಲ. ಬಿಜೆಪಿ ಕಾಲದ ಶೇ 40 ರಷ್ಟು ಕಮಿಷನ್‌ ತನಿಖೆ ನಡೆಯುತ್ತಿದೆ. ಎಷ್ಟು ನುಂಗಿದ್ದಾರೆ ಎಂದರೆ ಅದರ ಆಳ– ಆಗಲವೇ ಗೊತ್ತಾಗುತ್ತಿಲ್ಲ’ ಎಂದರು. 

ADVERTISEMENT

‘ಪಿಎಸ್‌ಐ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಿ’ ಎಂದು ಯತ್ನಾಳ್‌ ಸವಾಲು ಹಾಕಿದರು.

'ಪಿಎಸ್‌ಐ, ಶೇ 40 ಕಮಿಷನ್‌, ಕೊರೊನಾ, ಪರುಶುರಾಮ್‌ ಥೀಮ್‌ ಪಾರ್ಕ್‌ನಿಂದ ಹಿಡಿದು ಎಲ್ಲವೂ ತನಿಖೆ ಆಗುತ್ತದೆ. ಯತ್ನಾಳ್ ಸಾಹೇಬ್ರು ಕೋ–ಆಪರೇಟ್‌ ಮಾಡಿದ್ರೆ ನಾಳೆನೇ ತನಿಖೆ ಮುಗಿದು ಹೋಗುತ್ತದೆ’ ಎಂದು ಪ್ರಿಯಾಂಕ್ ಹೇಳಿದರು.

‘ಈ ಸರ್ಕಾರ ಬಂದ ಮೇಲೆ ಶೇ 40 ರಷ್ಟು ಕಮಿಷನ್ ಚಾಲೂ ಆಗಿದೆ. ರಾಜ್ಯದಲ್ಲಿ ಸರ್ವ ಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ’ ಎಂದು ಯತ್ನಾಳ್‌ ಹಾಸ್ಯ ಚಟಾಕಿ ಹಾರಿಸಿದರು.

‘ಒಬ್ಬೊಬ್ಬರೇ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಮುಂದೆ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಸೇರಿದರೂ ಅಚ್ಚರಿ ಇಲ್ಲ’ ಎಂದು ಯತ್ನಾಳ್ ಹೇಳಿದಾಗ, ‘ನಮ್ಮ ಹೆಣವೂ  ಬಿಜೆಪಿ ಕಚೇರಿಗೆ ಹೋಗಲ್ಲ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.