ADVERTISEMENT

ಸುಮ್ಮನಿದ್ದರೆ ಇಷ್ಟೊತ್ತಿಗೆ ಸಿ.ಎಂ ಆಗುತ್ತಿದ್ದೆ: ಯತ್ನಾಳ್

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ತಾಕತ್ತು ರಾಜ್ಯದಲ್ಲಿ ಯಾರಿಗೂ ಇಲ್ಲ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 19:23 IST
Last Updated 17 ಜನವರಿ 2021, 19:23 IST
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್   

ರಾಣೆಬೆನ್ನೂರು (ಹಾವೇರಿ): ‘ನಾನು ಸುಮ್ಮನೆ ಇದ್ದಿದ್ದರೆ ಇಷ್ಟೊತ್ತಿಗೆ ಮುಖ್ಯಮಂತ್ರಿ ಆಗುತ್ತಿದ್ದೆ. ಜಗದೀಶ ಶೆಟ್ಟರ್‌, ಸದಾನಂದ ಗೌಡ ಮುಖ್ಯಮಂತ್ರಿಯೇ ಆಗುತ್ತಿರಲಿಲ್ಲ. ನಾ ಯಾಕ ಮಂದಿ ಕೈಕಾಲು ಹಿಡಿಯಲಿ? ನನ್ನ ಬಯೋಡೆಟಾ ಚೊಕ್ಕ ಇದೆ. ಕುಟುಂಬ ರಾಜಕಾರಣಿ ಅಲ್ಲ. ಭ್ರಷ್ಟಾಚಾರದ ಆರೋಪವಿಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಭಾನುವಾರ ‘ಸಿದ್ಧಸಿರಿ’ ಸೌಹಾರ್ದ ಸಹಕಾರ ಸಂಘದ ವಿಜಯಪುರ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಚಿವನಾಗಬೇಕೆಂದು ಯಾರ ಬಳಿ ಹೋದವನಲ್ಲ. ಸ್ವಾರ್ಥಕ್ಕಾಗಿ ಹೇಳಿಕೆ ಕೊಡುವುದಿಲ್ಲ. ನೇರ ಮಾತನಾಡುತ್ತೇನೆ. ಯಾರನ್ನೋ ಖುಷಿ ಪಡಿಸುವ ರಾಜಕಾರಣಿ ಅಲ್ಲ’ ಎಂದು ಸಮರ್ಥಿಸಿಕೊಂಡರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಳಿಗೆ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಕೊಡಿ ಎಂದು ಕೇಳಲು ಮಾತ್ರ ಹೋಗಿದ್ದೇನೆ. ಜಮೀರ್‌ ಅಹ್ಮದ್‌ ಅವರ ಕ್ಷೇತ್ರಕ್ಕೆ ₹200 ಕೋಟಿ ಅನುದಾನ ನೀಡುತ್ತಾರೆ...ನಾನು ಅನುದಾನ ಕೇಳಲಿಕ್ಕೆ ಹೋದರೆ ಹಣ ಇಲ್ಲ ಎನ್ನುತ್ತಾರೆ, ಶಾಸಕರಾಗಿ ಇವರ ಹಿಂದೆ ಸುತ್ತುತ್ತಿರಬೇಕೇನು?’ ಎಂದು ಪ್ರಶ್ನಿಸಿದರು.

ADVERTISEMENT

‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ತಾಕತ್ತು ರಾಜ್ಯದಲ್ಲಿ ಯಾರಿಗೂ ಇಲ್ಲ. ಪ್ರಾಮಾಣಿಕರಿಗೂ ಒಂದು ಕಾಲ ಇದೆ. ಶಾಸ್ತ್ರೀಜಿ, ಅಟಲ್‌ಜೀ ಪ್ರಧಾನಿಯಾಗಲಿಲ್ಲವೇ? ಪ್ರಧಾನಿ ಮೋದಿ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಆರಿಸಿ ಬಂದಾರೇನು? ಅವರು ಪ್ರಾಮಾಣಿಕರು. ನನಗೂ ಕಾಲ ಕೂಡಿ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.