ಬೆಂಗಳೂರು: ಪಕ್ಷ ಮತ್ತು ಜನಸಂಘಟನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ‘ಜನಸಂಕಲ್ಪ ಯಾತ್ರೆ’ಗೆ ರಾಯಚೂರಿನಲ್ಲಿ ಮಂಗಳವಾರ ಚಾಲನೆ ಸಿಗಲಿದೆ.
ರಾಯಚೂರು, ಕೊಪ್ಪಳ, ವಿಜಯಪುರ, ವಿಜಯನಗರ, ಬೀದರ್, ಯಾದಗಿರಿ, ಕಲಬುರಗಿ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ 52 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಹಾದು ಹೋಗಲಿದೆ.
ಒಟ್ಟು 26 ದಿನಗಳ ಈ ಯಾತ್ರೆಯ ಮಧ್ಯೆ ಏಳು
ಬೃಹತ್ ಸಮಾವೇಶಗಳು ನಡೆಯುಲಿವೆ.ಈ ಯಾತ್ರೆ ಡಿಸೆಂಬರ್ 25ಕ್ಕೆ ಮುಕ್ತಾಯವಾಗಲಿದೆ ಎಂದು ಯಾತ್ರೆಯ ಸಂಯೋಜಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿವೆ. ಏಳು ಸಮಾವೇಶಗಳ ಪೈಕಿ ಒಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನ.10 ರಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡುಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಎಂದೂ ಹೇಳಿದರು.
ಎಲ್ಲೆಲ್ಲಿ ಸಮಾವೇಶಗಳು: ಅಕ್ಟೋಬರ್ 16ಕ್ಕೆ ಮೈಸೂರಿನಲ್ಲಿ ಎಸ್‌ಸಿ ಮೋರ್ಚಾ ಸಮಾವೇಶ, ಅ.30ಕ್ಕೆ ಕಲಬುರಗಿಯಲ್ಲಿ ಒಬಿಸಿ ಮೋರ್ಚಾ ಸಮಾವೇಶ, ನ.13 ರಂದು ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ, ನ.27ಕ್ಕೆ ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ, ಡಿ.11ಕ್ಕೆ ಬಳ್ಳಾರಿಯಲ್ಲಿ ಎಸ್.ಟಿ. ಮೋರ್ಚಾ ಸಮಾವೇಶ, ಡಿ.25ಕ್ಕೆ ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ, ಜನವರಿ 8ಕ್ಕೆ ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಸಮಾವೇಶ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.