ADVERTISEMENT

ರಾಜ್ಯದಲ್ಲಿ ಶೀಘ್ರ ತುರ್ತು ಪರಿಸ್ಥಿತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 12:30 IST
Last Updated 5 ಜೂನ್ 2023, 12:30 IST
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಳಗಾವಿ: ‘ಕಾಂಗ್ರೆಸ್ಸಿಗೆ ಎರಡೇ ದಿನದಲ್ಲಿ ಅಧಿಕಾರದ ಅಮಲು ಹೆಚ್ಚಾಗಿದೆ. ಜನರ ವಾಕ್‌ ಸ್ವಾತಂತ್ರ್ಯ ಕಿತ್ತುಕೊಂಡ ರೀತಿಯಲ್ಲಿ ಮಂತ್ರಿಗಳು ಮಾತನಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ತಲೆದೋರಬಹುದು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅವರು ತುರ್ತುಪರಿಸ್ಥಿತಿ ಹೇರಿದರೂ ಬಿಜೆಪಿ ಅದಕ್ಕೆ ಅವಕಾಶ ನೀಡುವುದಿಲ್ಲ. ಜನರ ಪರವಾಗಿ ನಿಂತು ಹೋರಾಡುತ್ತದೆ’ ಎಂದರು.

‘ಗೋಹತ್ಯೆ ನಿಷೇಧ, ಪಠ್ಯಪುಸ್ತಕ ಪರಿಷ್ಕೃರಣೆ ಮುಂತಾದ ವಿಷಯಗಳ ಕುರಿತು ಮಂತ್ರಿಗಳು ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಯಾರಾದರೂ ಸರ್ಕಾರನ್ನು ಪ್ರಶ್ನಿಸಿದರೆ ಜೈಲಿಗೆ ಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಅಧಿಕಾರದ ಅಮಲು ಇಷ್ಟು ಬೇಗೆ ನೆತ್ತಿಗೇರಿದೆ’ ಎಂದು ದೂರಿದರು.

ADVERTISEMENT

‘ಗೋ ಹತ್ಯೆ ನಿಷೇಧ ಕಾಯ್ದೆ 1965ರಿಂದಲೂ ಇದೆ. ನಾವು ತಿದ್ದುಪಡಿ ಮಾಡಿ ಶಿಕ್ಷೆ ಕಠಿಣಗೊಳಿಸಿದ್ದೇವೆ ಅಷ್ಟೇ. ಗೋವಿನ ವಿಷಯಕ್ಕೆ ಬಂದರೆ ಕಾಂಗ್ರೆಸ್‌ಗೆ ಆಪತ್ತು ಕಾದಿದೆ’ ಎಂದೂ ಎಚ್ಚರಿಸಿದರು.

ಇದೇನು ಇಸ್ಲಾಂ ರಾಷ್ಟ್ರವಲ್ಲ:

‘ಅಧಿಕಾರಿಗಳು ಕೆಲಸ ಮಾಡದಿದ್ದರೆ ಚಾಕುವಿನಿಂದ ಹೊಡೆಯುತ್ತೇವೆ, ಜೈಲಿಗೆ ಹಾಕುತ್ತೇವೆ ಎಂದು ಸ್ವತಃ ಸಚಿವರೇ ಹೇಳುತ್ತಿದ್ದಾರೆ. ಜನ ಕೊಟ್ಟ ಅಧಿಕಾರವನ್ನು ಈ ರೀತಿ ದುರುಪಯೋಗ ಮಾಡಿಕೊಳ್ಳಬಾರದು. ಯಾರ‍್ಯಾರನ್ನು ಜೈಲಿಗೆ ಹಾಕುತ್ತೀರೋ ಹಾಕಿ. ಜನರು ತಿರುಗಿಬಿದ್ದರೆ ನಿಮಗೆ ಜೈಲುಗಳು ಸಾಲುವುದಿಲ್ಲ. ತಾಕತ್ತು ಬಳಸಿ ಜನರನ್ನೇ ಮಣಿಸುತ್ತೇವೆ ಎನ್ನಲು ಇದೇನು ಇಸ್ಲಾಂ ರಾಷ್ಟ್ರವಲ್ಲ’ ಎಂದೂ ಬೊಮ್ಮಾಯಿ ಕಿಡಿ ಕಾರಿದರು.

‘ಗ್ಯಾರಂಟಿ’ಗಳನ್ನು ಜಾರಿ ಮಾಡಲು ಅಭಿವೃದ್ಧಿ ಕೆಲಸಗಳನ್ನು ತಡೆಯಬಾರದು. ‘ವಿವೇಕ’ ಯೋಜನೆ ನಿಲ್ಲಿಸದಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮನವಿ ಮಾಡುತ್ತೇನೆ’ ಎಂದರು.

‘ಇದಕ್ಕೂ ಮುಂಚೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ‘ಹೆಸ್ಕಾಂ’ ಮೇಲೆ ದೊಡ್ಡ ಹೊರೆ ಹಾಕಿದ್ದರು. ನಾನು ₹13 ಸಾವಿರ ಕೋಟಿ ನೀಡಿ ಹೆಸ್ಕಾಂ ಹಾಗೂ ಕೆಪಿಸಿಟಿಸಿಎಲ್‌ ಪುನಶ್ಚೇತನ ಮಾಡಿದ್ದೆ. ಈಗ ಏಕಾಏಕಿ ವಿದ್ಯುತ್‌ ಬಿಲ್‌ ಹೆಚ್ಚಳ ಮಾಡಿ, ಜನರಿಗೆ ದ್ರೋಹ ಮಾಡಿದ್ದಾರೆ’ ಎಂದೂ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.