ADVERTISEMENT

ಬಿಟ್‌ ಕಾಯಿನ್‌ ಪ್ರಕರಣ: ಯಾರನ್ನೂ ಬಿಡಲ್ಲ, ಬಲಿ ಹಾಕ್ತೇವೆ- ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 21:36 IST
Last Updated 14 ನವೆಂಬರ್ 2021, 21:36 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ಯಾರೇ ಇದ್ದರೂ ಮುಖ, ಮುಲಾಜಿಲ್ಲದೆ ಬಲಿ ಹಾಕುತ್ತೇವೆ. ಈ ವಿಚಾರದಲ್ಲಿ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಈ ಪ್ರಕರಣವನ್ನು ಬಯಲಿಗೆಳೆದವರೇ ನಾವು. ತನಿಖೆ ಮಾಡಿದ್ದು, ಇ.ಡಿ ಮತ್ತು ಸಿಬಿಐಗೆ ಶಿಫಾರಸು ಮಾಡಿದ್ದು ನಮ್ಮ ಸರ್ಕಾರ. ಇ.ಡಿಯಿಂದ ತನಿಖೆ ನಡೆಯುತ್ತಿದೆ. ಸಿಬಿಐ, ಇಂಟರ್‌ಪೋಲ್‌ಗೂ ವಹಿಸಲಾಗಿದೆ. ಅವರು ಕೋರಿದ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿದೆ’ ಎಂದರು.

‘ಈ ಪ್ರಕರಣದಲ್ಲಿ ರಾಷ್ಟ್ರಕ್ಕೆ, ರಾಜ್ಯಕ್ಕೆ, ವ್ಯಕ್ತಿಗಳಿಗೆ ಮೋಸವಾಗಿದ್ದರೆ, ಮೋಸ ಮಾಡಿದವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದೂ ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ADVERTISEMENT

‘ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೇಳಿರುವ ಆರು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಈ ಪ್ರಕರಣಕ್ಕೆ 2016ರಿಂದ ಕರ್ನಾಟಕದೊಂದಿಗೆ ಸಂಬಂಧ ಇರುವುದಾದರೆ, ಆಗ ಅಧಿಕಾರದಲ್ಲಿದ್ದ ಅವರ (ಕಾಂಗ್ರೆಸ್‌) ಸರ್ಕಾರ ತನಿಖೆ ಏಕೆ ಕೈಗೊಳ್ಳಲಿಲ್ಲ. ಅವರ ಪಕ್ಷದ ಮುಖ್ಯಮಂತ್ರಿ, ಸಚಿವರು ಯಾಕೆ ಗಮನಹರಿಸಲಿಲ್ಲ. ಆರೋಪಿ ಶ್ರೀಕೃಷ್ಣನನ್ನು ಬಂಧಿಸಿ, ಬಿಟ್ಟು ಕಳುಹಿಸಲಾಯಿತು. ನಿರೀಕ್ಷಣಾ ಜಾಮೀನು ಪಡೆದಾಗಲೂ ವಿಚಾರಣೆಗೆ ಅವಕಾಶವಿತ್ತು. ಮುಕ್ತವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬಿಟ್ಟು ನಮ್ಮನ್ನು ಈಗ ಏಕೆ ಪ್ರಶ್ನಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ‘ಆರೋಪಿಯನ್ನು ಬಿಟ್ಟು ಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ’ ಎಂದರು.

‘ಟ್ವಿಟರ್‌ ಹ್ಯಾಂಡಲ್ ಆಧಾರದಲ್ಲಿ ಸುರ್ಜೇವಾಲಾ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದಾದರೆ, ಅದು ಅವರ ಚಿಂತನೆಯ ದಿವಾಳಿತನ. ಈ ರೀತಿ ಆಧಾರರಹಿತ ಆರೋಪಗಳನ್ನು ಮಾಡುವುದು ರಾಷ್ಟ್ರೀಯ ಪಕ್ಷದ ವಕ್ತಾರರಿಗೆ ಶೋಭಿಸುವುದಿಲ್ಲ. ಸಾಂದರ್ಭಿಕ ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು’ ಎಂದು ಸಲಹೆ ನೀಡಿದರು.

ವಶಪಡಿಸಿಕೊಂಡಿರುವ ಬಿಟ್ ಕಾಯಿನ್‌ಗಳ ಬಗ್ಗೆ ಗೊಂದಲವಿರುವ ಕುರಿತು ಕೇಳಿದ ಪ್ರಶ್ನೆಗೆ, ‌‘ಆರೋಪಿ ಶ್ರೀಕೃಷ್ಣ ತನ್ನ ಖಾತೆ ಎಂದು ಯಾವುದೋ ಎಕ್ಸ್‌ಚೇಂಜ್ ಖಾತೆ ನೀಡಿದ್ದಾನೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.