ADVERTISEMENT

ನೀರು ಬಿಟ್ಟ ಮೇಲೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ಏನಿದೆ?: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 16:31 IST
Last Updated 19 ಸೆಪ್ಟೆಂಬರ್ 2023, 16:31 IST
   

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿದ ಮೇಲೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ಏನಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡುತ್ತಿದೆ. ಸೆ.12ರ ನಂತರ ನೀರು ಹರಿಸಲು ಆಗುವುದಿಲ್ಲ ಎಂದು ಸುಪ್ರೀಂಕೊರ್ಟ್‌ಗೆ ಅಫಿಡವಿಟ್ ಹಾಕಿದೆ‌. ಕೋರ್ಟ್ ಮುಂದೆಯೂ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದ್ದಾರೆ.

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ನಾನು ಇಕ್ಕಟ್ಟಿಗೆ ಸಿಲುಕಿಸಿದ್ದೇನೆ ಎಂದು ಹೇಳಿದ್ದಾರೆ. ಅದರ ಅಗತ್ಯ ನನಗಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಸಲಹೆ ನೀಡಿದ್ದೆ. ಸಲಹೆ ಸ್ವೀಕರಿಸಲು ಅವರು ಸಿದ್ಧರಿಲ್ಲ. ಸರ್ಕಾರದ ನಡೆಯೇ ರಾಜ್ಯದ ರೈತರು, ಕಾವೇರಿ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ‌. ಅವರು ವಕೀಲರ ಮಾತಿನಂತೆ ನಡೆಯುತ್ತಿದ್ದಾರೆ. ಸರ್ಕಾರ ನಡೆಸುವವರಿಗೆ ಜವಾಬ್ದಾರಿ, ಅರಿವು ಇರಬೇಕು’ ಎಂದಿದ್ದಾರೆ. 

ADVERTISEMENT

‘ಈಗ ಪ್ರಧಾನಿ ಬಳಿ ಹೋಗುವುದರಲ್ಲಿ ಅರ್ಥವಿಲ್ಲ‌. 1990ಕ್ಕೂ ಮೊದಲೇ ಈ ವಿಚಾರ ಪ್ರಧಾನಿ ಬಳಿ ಚರ್ಚೆಯಾಗಿದೆ. ರಾಜ್ಯದ ಜನರ ದಾರಿ ತಪ್ಪಿಸಲು ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ. ನಮ್ಮ ವಕೀಲರು ತಮಿಳುನಾಡಿನ ಅಣೆಕಟ್ಟುಗಳಲ್ಲಿನ ನೀರಿನ ಸ್ಥಿತಿ, ಬಳಕೆ ಮಾಡಿರುವ ಪ್ರಮಾಣವನ್ನು ಕೋರ್ಟ್‌ಗೆ ಮನವರಿಕೆ ಮಾಡುವ ಕೆಲಸ ಮಾಡದಿದ್ದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ‌’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಮಾಜಿ ಪ್ರಧಾನಿ ದೇವೆಗೌಡರ ಸಲಹೆಯಂತೆ ನ್ಯಾಯಾಲಯದ ಹೊರಗೆ  ಇತ್ಯರ್ಥ ಮಾಡಿಕೊಳ್ಳಬಹುದು. ಆದರೆ, ಮಾತುಕತೆಗೆ ತಮಿಳುನಾಡು ಸಹಕಾರ ನೀಡುವುದಿಲ್ಲ. ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಮ್ಮ(ಬಿಜೆಪಿ) ಸಂಸದರಿಗೂ ಸೂಚಿಸಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.