ADVERTISEMENT

ಎತ್ತಿನಹೊಳೆ ಯೋಜನೆಗೆ ₹ 7,721 ಕೋಟಿ ವೆಚ್ಚ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 16:12 IST
Last Updated 4 ಫೆಬ್ರುವರಿ 2021, 16:12 IST
ವಿಧಾನಪರಿಷತ್ತಿನಲ್ಲಿ ಉತ್ತರ ನೀಡಿದ ಗೃಹ, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿಪ್ರಜಾವಾಣಿ ಚಿತ್ರ
ವಿಧಾನಪರಿಷತ್ತಿನಲ್ಲಿ ಉತ್ತರ ನೀಡಿದ ಗೃಹ, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿಪ್ರಜಾವಾಣಿ ಚಿತ್ರ   

ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2020ರ ಡಿಸೆಂಬರ್‌ ಅಂತ್ಯದವರೆಗೆ ₹ 7,721.65 ಕೋಟಿ ವೆಚ್ಚ ಮಾಡಲಾಗಿದೆ ಎಂದು ಗೃಹ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಿದ ಅವರು, ‘2023ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಕೆಲವು ಸ್ಥಳಗಳಲ್ಲಿ ರೈತರ ಅಸಹಕಾರದಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಯೋಜನೆ ಕುಂಟುತ್ತಾ ಸಾಗಿದೆ. ಬೈರಗೊಂಡ್ಲು ಜಲಾಶಯ ನಿರ್ಮಾಣ ಸ್ಥಳದಲ್ಲಿ ಮೂರು ವರ್ಷದಿಂದ ಕೆಲಸ ಸ್ಥಗಿತಗೊಂಡಿದೆ. ಕಾಮಗಾರಿ ಸಂಬಂಧ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಬೇಕು’ ಎಂದು ನಾರಾಯಣಸ್ವಾಮಿ ಆಗ್ರಹಿಸಿದರು. ಮುಖ್ಯಮಂತ್ರಿಯವರ ಜತೆ ಚರ್ಚಿಸಿ, ಸಭೆ ನಿಗದಿಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ADVERTISEMENT

ನಿರ್ಭಯಾ ನಿಧಿ: ₹ 208 ಕೋಟಿ ಬಿಡುಗಡೆ
ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ‘ನಿರ್ಭಯಾ ನಿಧಿ ಯೋಜನೆಯಡಿ ಗೃಹ ಇಲಾಖೆಯಿಂದ ₹ 667 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸುರಕ್ಷ ನಗರ ಸೇರಿದಂತೆ ವಿವಿಧ ಯೋಜನೆಗಳಿಗೆ ಈವರೆಗೆ ₹ 208.05 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸುರಕ್ಷ ನಗರ ಯೋಜನೆಯಡಿ ಸಿಸಿಟಿವಿ ಕ್ಯಾಮೆರ ಅಳವಡಿಸುವ ಕಾಮಗಾರಿಗೆ ಮೂರನೇ ಕರೆಯಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ. ನಿರ್ಭಯಾ ನಿಧಿ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಈವರೆಗೆ ₹ 16.48 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.