ADVERTISEMENT

ಮಳೆ ಪರಿಹಾರಕ್ಕೆ ಹಣದ ಕೊರತೆಯಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 19:31 IST
Last Updated 12 ಜುಲೈ 2022, 19:31 IST
ಬಸವರಾಜ ಬೊಮ್ಮಯಿ
ಬಸವರಾಜ ಬೊಮ್ಮಯಿ   

ಮೈಸೂರು/ಮಡಿಕೇರಿ: ‘ಮಳೆಯಿಂದ ಆಗಿರುವ ಭೂಕುಸಿತ, ಬೆಳೆ ಮತ್ತು ಜೀವಹಾನಿ ಕುರಿತು ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ. ಪರಿಹಾರ ಕಾರ್ಯಗಳಿಗೆ ಹಣದ ಕೊರತೆಯಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅತಿವೃಷ್ಟಿ ಬಾಧಿತ ಪ್ರದೇಶಗಳಿಗೆ ಪ್ರವಾಸ ತೆರಳುವ ಮುನ್ನ ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ₹ 739 ಕೋಟಿ ಲಭ್ಯವಿದೆ’ ಎಂದರು.

‘ಸಮೀಕ್ಷೆ ಕಾರ್ಯದ ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಬಾಧಿತ ಪ್ರದೇಶಗಳ ಪೈಕಿ ಭೂ ಕುಸಿತ ಆಗುತ್ತಿರುವ ಸೂಕ್ಷ್ಮ ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಮನವೊಲಿಸಲಾಗುವುದು’ ಎಂದು ತಿಳಿಸಿದರು.

‘ಅತಿವೃಷ್ಟಿಯಿಂದ ರಾಜ್ಯದ ವಿವಿಧೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೊಡಗಿನಲ್ಲಿ ಲಘು ಭೂಕಂಪ– ಭೂ ಕುಸಿತ,‌ ಕರಾವಳಿಯಲ್ಲಿ ಕಡಲ ಕೊರೆತ ಹಾಗೂ ಉತ್ತರ ಕರ್ನಾಟಕದ ನದಿಪಾತ್ರಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ‌. ನದಿ ಪಾತ್ರದಲ್ಲಿ ಹಾನಿ ತಡೆಗೆ ಶಾಶ್ವತ ಪರಿಹಾರ ಹಾಗೂ ಮನೆಗಳ ಸ್ಥಳಾಂತರಕ್ಕೆ ತಜ್ಞರ ಅಭಿಪ್ರಾಯ ಕೇಳಲಾಗಿದೆ’ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

'ಉಡುಪಿ, ಮಂಗಳೂರು, ಕೊಡಗು ಹಾಗೂ ಉತ್ತರ ಕನ್ನಡ ಸೇರಿ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇಡೀ ಸರ್ಕಾರ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ.‌ ಸರ್ಕಾರ ಸಕ್ರಿಯವಾಗಿಲ್ಲ ಎಂಬ ಆರೋಪ ಸುಳ್ಳು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಲ್ಲ ಸಂತ್ರಸ್ತರಿಗೂ ಪಡಿತರ: ಮಡಿಕೇರಿಯಲ್ಲಿ ಮಾತನಾಡಿದ ಅವರು, ‘ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರು ಮನೆಗೆ ಮರಳುವಾಗ ಹಾಗೂ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದವರಿಗೂ ಪಡಿತರ ವಿತರಿಸಲಾಗುವುದು’ ಎಂದು ತಿಳಿಸಿದರು.

‘ಕೊಡಗು ಜಿಲ್ಲೆಯಲ್ಲಿ ‍ಪದೇ ಪದೇ ಭೂಕಂಪನ ಆಗುತ್ತಿರುವ ಸ್ಥಳದ ಅಧ್ಯಯನಕ್ಕೆ ತಜ್ಞರನ್ನು ಆಹ್ವಾನಿಸಲಾಗಿದೆ. ನ್ಯಾಷನಲ್ ಜಿಯಾಗ್ರಫಿಕ್ ಇನ್‌ಸ್ಟಿಟ್ಯೂಟ್, ಮೈಸೂರು ವಿಶ್ವವಿದ್ಯಾನಿಲಯದ ತಜ್ಞರು ಮುಂದಿನ ವಾರ ಇಲ್ಲಿಗೆ ಬಂದು ಅಧ್ಯಯನ ನಡೆಸುವರು. ಅವರ ವರದಿಯ ಅನುಸಾರ ರಕ್ಷಣಾ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಭೂಕುಸಿತ ಪ್ರಕರಣ ಕುರಿತು ಅಮೃತ ವಿಶ್ವವಿದ್ಯಾಲಯದ ತಜ್ಞರು ಅಧ್ಯಯನ ನಡೆಸಿ ಈಗಾಗಲೇ ಪ್ರಾಥಮಿಕ ವರದಿ ನೀಡಿದ್ದಾರೆ. ಅಂತಿಮ ವರದಿ ನೀಡಿದ ಬಳಿಕ, ಶಿಫಾರಸುಗಳನ್ನು ಮುಂದಿನ ಮಳೆಗಾಲಕ್ಕೂ ಮುನ್ನ ಜಾರಿಗೆ ತರಲಾಗುವುದು’ ಎಂದು ಹೇಳಿದರು.

ಮಳೆಯಿಂದ ಹಾನಿಗೀಡಾದಮಡಿಕೇರಿಯ ಮಲ್ಲಿಕಾರ್ಜುನ ನಗರ, ಮಡಿಕೇರಿ–ಮಂಗಳೂರು ರಸ್ತೆಯಲ್ಲಿ ಕರ್ತೋಜಿ ಸಮೀಪದ ಕುಸಿಯುತ್ತಿರುವ ಮಣ್ಣು, ಕೊಯನಾಡಿನ ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.