ಬೆಂಗಳೂರು: ಮಹಿಳಾ ಸದಸ್ಯೆ ಸಭಾಪತಿಯಾಗಿ ಆಯ್ಕೆಯಾಗಬೇಕು. ಆಗ ಸದನದ ಇತಿಹಾಸ ಪರಿಪೂರ್ಣವಾಗುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನಪರಿಷತ್ತಿನ ಉಗಮ, ನಡೆದು ಬಂದ ಹಾದಿ ಹಾಗೂ ಐತಿಹಾಸಿಕ ನಡೆಯ ಕುರಿತು ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಧಾನಪರಿಷತ್ ಒಂದು ಕಾಲದಲ್ಲಿ ಜ್ಞಾನಿಗಳ ತಾಣವಾಗಿತ್ತು. ಅತ್ಯುತ್ತಮ, ಸ್ವಾರಸ್ಯಕರ ಚರ್ಚೆಗಳು ನಡೆಯುತ್ತಿದ್ದವು. ವಿಧಾನಸಭೆಯ ಸದಸ್ಯರೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸುತ್ತಿದ್ದರು. ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡಲು ಸಾಧ್ಯವಾಗದೆ ಇಬ್ಬರು ಸಚಿವರು ಹಿಂದೆ ರಾಜೀನಾಮೆ ನೀಡಿದ್ದರು. ಈಗ ಅಂತಹ ವಾತಾವರಣ ಇಲ್ಲವಾಗಿದೆ ಎಂದರು.
ಪರಿಷತ್ ಇತಿಹಾಸದ ಕಿರುಚಿತ್ರ ಬಿಡುಗಡೆ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಸಂಶೋಧಕರಿಗೆ ಬೇಕಾಗಿರುವ ವಿಧಾನ ಪರಿಷತ್ತಿನ ಸಮಗ್ರ ಮಾಹಿತಿ ಈ ಸಾಕ್ಷ್ಯಚಿತ್ರದಲ್ಲಿದೆ. ಇದು ಅರ್ಥಪೂರ್ಣವಾದ ಕೆಲಸ. ಗಡಿ, ನೆಲ–ಜಲ ಸಂರಕ್ಷಣೆಗೆ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ದೊಡ್ಡ ಧ್ವನಿಯಾಗಿರುವ ವಿಧಾನ ಪರಿಷತ್ ಚಿಂತಕರ ಚಾವಡಿಯಾಗಿ ಸದಾ ಮುಂದುವರಿಯಬೇಕು ಎಂದು ಆಶಿಸಿದರು.
ವಿಧಾನಪರಿಷತ್‌ನ ಸಭಾ ನಾಯಕರಾದ ಸಚಿವ ಎನ್.ಎಸ್. ಬೋಸರಾಜು, ಮಾಜಿ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಯುಬಿ. ವೆಂಕಟೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.