ಬೆಂಗಳೂರು: ವಿಧಾನ ಪರಿಷತ್ತಿಗೆ ಶಿಕ್ಷಕರ ಮತ ಕ್ಷೇತ್ರದಿಂದ ಎಂಟು ಬಾರಿ ನಿರಂತರವಾಗಿ ಆಯ್ಕೆಯಾಗಿ 45 ವರ್ಷ ಪೂರೈಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ, ಪರಿಷತ್ತಿನ ಸದಸ್ಯರು ಕಲಾಪದ ವೇಳೆ ಮೆಚ್ಚುಗೆ ಸೂಚಿಸಿದರು.
ಮಂಗಳವಾರ ಕಲಾಪದ ಶೂನ್ಯವೇಳೆಯ ನಂತರ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರು ಅಭಿನಂದನಾ ನಿರ್ಣಯ ಮಂಡಿಸಿದರು. ಬಿ.ಕೆ.ಹರಿಪ್ರಸಾದ್ ಅವರು ಅದನ್ನು ಬೆಂಬಲಿಸಿದರು. ಆ ನಂತರ ಆಡಳಿ ಮತ್ತು ವಿರೋಧ ಪಕ್ಷಗಳ ಹಲವು ಸದಸ್ಯರು ಬಸವರಾಜ ಹೊರಟ್ಟಿ ಅವರ ಬಗ್ಗೆ ಸುಮಾರು ನಾಲ್ಕು ತಾಸು ಮಾತನಾಡಿದರು.
ಸಚಿವರಾದ ಎಚ್.ಕೆ.ಪಾಟೀಲ, ಎಂ.ಬಿ.ಪಾಟೀಲ, ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಕಾಂಗ್ರೆಸ್‌ನ ಪುಟ್ಟಣ್ಣ, ಬಲ್ಕೀಸ್ ಬಾನು, ಐವನ್ ಡಿಸೋಜ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಭಾರತಿ ಶೆಟ್ಟಿ, ಟಿ.ಎ.ಶರವಣ ಸೇರಿ ಹಲವರು ಮಾತನಾಡಿದರು.
ಹೊರಟ್ಟಿ ಅವರು ಉತ್ತಮ ಸಂಸದೀಯ ಪಟು. ವಿರೋಧ ಮತ್ತು ಆಡಳಿತ ಪಕ್ಷಗಳ ಸದಸ್ಯರನ್ನು ಸರಿದೂಗಿಸಿಕೊಂಡು ಸದನವನ್ನು ನಡೆಸಿಕೊಂಡು ಹೋಗುತ್ತಾರೆ. ಗದರುವಾಗ ಗದರುತ್ತಾರೆ, ನಗಿಸುವಾಗ ನಗಿಸುತ್ತಾರೆ, ಕಲಾಪ ಸರಿದಾರಿಯಲ್ಲಿರುವಂತೆ ಎಚ್ಚರಿಕೆ ವಹಿಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
‘ಮೌಲ್ಯಾಧಾರಿತ ರಾಜಕಾರಣಿ’ ‘ಸಭಾಪತಿ ಹೊರಟ್ಟಿ ಅವರು ರಾಜಕಾರಣದಲ್ಲಿ 45 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವುದು ಪ್ರಶಂಸನೀಯ. ಪ್ರಾಮಾಣಿಕತೆ ದಕ್ಷತೆ ನೇರ ನಡೆ ನುಡಿಗಳ ಮೂಲಕ ಮೌಲ್ಯಾಧಾರಿತ ರಾಜಕಾರಣಿಯಾಗಿ ಇತರರಿಗೂ ಮಾದರಿಯಾಗಿದ್ದಾರೆ’ ಎಂದು ಕಾಂಗ್ರೆಸ್‌ನ ಎಂ.ಆರ್.ಸೀತಾರಾಂ ಹೇಳಿದರು. ‘ಹೊರಟ್ಟಿ ಅವರು ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಹಲವಾರು ಸಂಸ್ಥೆಗಳಿಗೆ ಸಹಾಯ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ವಿಧಾನ ಪರಿಷತ್ ಹಾಗೂ ವಿಧಾನಸಭೆ ಸದಸ್ಯರು ಒಳಗೊಂಡು ಹೆಚ್ಚಿನ ಸಾರ್ಥಕ ಸೇವೆ ಮಾಡಿರುವವರಲ್ಲಿ ಅವರು ಕೂಡ ಒಬ್ಬರು. ಅವರ ಸುದೀರ್ಘ ಆಡಳಿತ ಆದರ್ಶನೀಯ’ ಎಂದರು.
‘ಪ್ರೀತಿ ನನ್ನನ್ನು ಕಟ್ಟಿಹಾಕಿದೆ’ ‘ನನ್ನ ಜೀವನದ ಶ್ರೇಷ್ಠ ದಿನ ಇಂದು. ನಿಮ್ಮ ಪ್ರೀತಿ–ವಿಶ್ವಾಸ ಪಕ್ಷಾತೀತವಾದ ಮಾತುಗಳು ನನ್ನನ್ನು ಕಟ್ಟಿಹಾಕಿವೆ. ನಾಳೆಯಿಂದ ಹೇಗೆ ಸದನ ನಡೆಸಬೇಕು ಎಂಬುದೇ ಇದೀಗ ನನ್ನ ಪ್ರಶ್ನೆಯಾಗಿದೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ನಾನು ಮೊದಲು 1978ರಲ್ಲಿ ಚುನಾವಣೆಗೆ ನಿಂತಾಗ ₹12 ಸಾವಿರ ವೆಚ್ಚ ಮಾಡಿದ್ದೆ. 17 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಎಂಟು ಬಾರಿ ನನ್ನನ್ನು ಆರಿಸಿರುವ ಶಿಕ್ಷಕರ ಋಣ ತೀರಿಸಲು 24 ಗಂಟೆಯೂ ಕೆಲಸ ಮಾಡುತ್ತಿದ್ದೇನೆ. ನಾಲ್ಕೈದು ತಾಸು ನೀವೆಲ್ಲರೂ ಮಾತನಾಡಿದ್ದನ್ನು ಎಂದಿಗೂ ಮರೆಯುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.