ADVERTISEMENT

ತುಳಸಿ ಪವರ್

ಗುರು ಪಿ.ಎಸ್‌
Published 20 ನವೆಂಬರ್ 2019, 20:00 IST
Last Updated 20 ನವೆಂಬರ್ 2019, 20:00 IST
Churumur21-11-2019
Churumur21-11-2019   

‘ಇದೇನ್ ಮುದ್ದಣ್ಣ, ಲಾರಿ ತುಂಬಾ ತುಳಸಿ ತುಂಬ್ಕೊಂಡು ಹೋಗ್ತಿದಿಯಾ’ ಕೇಳ್ದ ವಿಜಿ.

‘ಹೊಸ ಬಿಸಿನೆಸ್ ಶುರು ಮಾಡಿದೀನಿ ಸರ್‌. ‘ತುಳಸಿ–ಸಲ್ಯುಷನ್ ಫಾರ್ ಆಲ್ ಪ್ರಾಬ್ಲಮ್ಸ್’ ಅನ್ನೋದು ಕಂಪನಿ ಹೆಸರು’.

‘ಪ್ರಾರಂಭ ಎಲ್ಲಿಂದ?’

ADVERTISEMENT

‘ಬೈ ಎಲೆಕ್ಷನ್ ಪ್ರಚಾರ ಎಲ್ಲೆಲ್ಲಿ ನಡೆಯುತ್ತೋ ಅಲ್ಲಿಂದ. ಭಾಷಣ ಕೇಳೋಕೆ ಬಂದಿರೊ ಒಬ್ಬೊಬ್ಬರಿಗೆ ಎರಡೆರಡು ತುಳಸಿ ದಳ ಕೊಡ್ತೀನಿ. ಒಂದ್ ದಳಕ್ಕೆ ಒಂದ್‌ ರೂಪಾಯಿ’.

‘ತುಳಸಿ ತಗೊಂಡ್ರೆ ಏನುಪಯೋಗ?’

‘ಅವನು ಕಳ್ಳ, ಇವನು ಸುಳ್ಳ, ಅವನು ಭ್ರಷ್ಟ, ಇವನು ನಿಕೃಷ್ಟ ಅಂತೆಲ್ಲ ರಾಜಕಾರಣಿಗಳು ಬೈತಿರ್ತಾರೆ. ಜನ ಕಿವಿಗಳಲ್ಲಿ ಒಂದೊಂದು ದಳ ಇಟ್ಟುಕೊಂಡರೆ ಇಂಥ ನೆಗೆಟಿವ್ ಮಾತೆಲ್ಲ ಕೇಳಲ್ಲ ಸಾರ್’.

‘ಇದೇನು ಇಷ್ಟುದ್ದುದ್ದ ತುಳಸಿ ಹಾರಗಳು... ಇವು ಯಾರಿಗೆ?’

‘ಇವು ಸೆಂಟ್ರಲ್ ಆಫೀಸ್‌ಗಳ ಬಾಗಿಲಿಗೆ ಕಟ್ಟೋಕೆ ಸಾರ್. ಬಿಎಸ್‌ಎನ್‌ಎಲ್, ಎಲ್ಐಸಿ ಆಫೀಸ್‌ಗಳವರು ಆಗಲೇ ಆರ್ಡರ್ ಕೊಟ್ಟಿದಾರೆ’.

‘ಅವರಿಗ್ಯಾಕೆ ತುಳಸಿ ಹಾರ?’

‘ಕೇಂದ್ರ ಸರ್ಕಾರದ ಕಣ್ಣು ಬೀಳದೇ ಇರಲಿ ಅಂತಾ ಸರ್’ ನಕ್ಕ ಮುದ್ದಣ್ಣ.

‘ಆ ಹೊನ್ನಾಳಿ ಮುತ್ತುದೊರೈಗೆ ಒಂದೆರಡು ಹಾರ ಕೊಡು. ಹೋರಿಗಳು ಬಂದು ಬಂದು ಗುದ್ದೋದಾದರೂ ತಪ್ಪುತ್ತೆ’.

‘ಅವರಿಂದ ಹಾನಿಯಾಗದಿರಲಿ ಅಂತಾ ಹೋರಿಗಳಿಗೆ ಕಟ್ಟಬೇಕಷ್ಟೇ’ ವ್ಯಂಗ್ಯವಾಗಿ ನಕ್ಕ ಮುದ್ದಣ್ಣ.

‘ಈ ತುಳಸಿ ದಳ ಇಷ್ಟೊಂದು ಪವರ್‌ಫುಲ್ಲು ಅಂತಾ ಯಾವ ಆಧಾರದ ಮೇಲೆ ಹೇಳ್ತೀಯಾ?’

‘ತುಳಸಿ ದಳವನ್ನ ಮೊಬೈಲ್ ಕವರ್‌ನಲ್ಲಿ ಇಟ್ಕೊಂಡ್ರೆ ರೇಡಿಯೇಷನ್ ತಡೆಗಟ್ಟಬಹುದು ಅಂತಾ ನಮ್ ಯೋಗ ಗುರುಗಳೇ ಹೇಳಿದ್ದಾರೆ. ವಿಕಿರಣವನ್ನೇ ಕಂಟ್ರೋಲ್ ಮಾಡುತ್ತೆ ಅಂದ್ಮೇಲೆ ಕೆಟ್ಟ ಮಾತು, ವಕ್ರದೃಷ್ಟಿಯನ್ನ ತಡೆಯಲ್ವಾ?’

‘ಓಹ್ ಹಾಗಾ... ಸರಿ, ನನಗೊಂದೆರಡು ದಳ ಕೊಡು’. ‘ನಿಮಗ್ಯಾಕೆ ಸರ್?’

‘ನಿನ್ನೆ ಹೆಂಡ್ತಿ ಬರ್ತ್‌ಡೇ ಇತ್ತು. ವಿಶ್ ಮಾಡೋದೇ ಮರೆತುಬಿಟ್ಟೆ’ ಕಿವಿಯಲ್ಲಿ ತುಳಸಿ ದಳ ಇಟ್ಕೊಂಡು ಮನೆಯತ್ತ ಹೆಜ್ಜೆ ಹಾಕಿದ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.