ADVERTISEMENT

13 ಹೊಸ ಶೈತ್ಯಾಗಾರಗಳ ಸ್ಥಾಪನೆ: ಬಿ.ಸಿ. ಪಾಟೀಲ

ರಾಜ್ಯದಲ್ಲಿ ಭೂಚೇತನ ಮರು ಜಾರಿ ಇಲ್ಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 18:46 IST
Last Updated 16 ಸೆಪ್ಟೆಂಬರ್ 2022, 18:46 IST
ಬಿ.ಸಿ. ಪಾಟೀಲ
ಬಿ.ಸಿ. ಪಾಟೀಲ   

ಬೆಂಗಳೂರು: ‘ಭೂಚೇತನ ಯೋಜನೆ ಮರುಜಾರಿಗೊಳಿಸುವ ಉದ್ದೇಶ ಇಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ತಿಳಿಸಿದರು.

ಜೆಡಿಎಸ್‌ನ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಯೋಜನೆ ಕೇಂದ್ರ ಸರ್ಕಾರದ್ದು. 2009ರಿಂದ 2018ರವರೆಗೆ ಈ ಯೋಜನೆ ಜಾರಿಯಲ್ಲಿತ್ತು. ಒಟ್ಟು 1.04 ಕೋಟಿ ಫಲಾನುಭವಿಗಳು ಯೋಜನೆ ಪ್ರಯೋಜನ ಪಡೆದಿದ್ದಾರೆ. ಆದರೆ, ಯೋಜನೆಯ ಅವಧಿ ಮುಗಿದಿರುವುದರಿಂದ ಮರುಜಾರಿಯ ಚಿಂತನೆ ಇಲ್ಲ’ ಎಂದು ತಿಳಿಸಿದರು.

‘ಆರ್‌ಐಡಿಎಫ್‌ ಯೋಜನೆ ಅಡಿ ಯಲ್ಲಿ ರಾಜ್ಯದ ವಿವಿಧೆಡೆ 2,500 ಟನ್‌ ಸಾಮರ್ಥ್ಯದ 13 ಶೈತ್ಯಾಗಾರಗಳನ್ನು ಸ್ಥಾಪಿಸಲಾಗುವುದು’ ಎಂದು ಸಚಿವರು ಪ್ರಕಟಿಸಿದರು.

ADVERTISEMENT

ಬೆಳೆ ವಿಮೆ ಕುರಿತು ಬಿಜೆಪಿಯ ಶಶೀಲ್‌ ಜಿ.ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲೂ ವಿಮಾ ಪ್ರತಿನಿಧಿಗಳಿರುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ಈ ವರ್ಷ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಅಡಿಯಲ್ಲಿ 18.50 ಲಕ್ಷ ರೈತರು ಬೆಳೆ ವಿಮೆಗಾಗಿ ನೋಂದಣಿ ಮಾಡಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ವರ್ಷ 7 ಲಕ್ಷ ಹೆಚ್ಚು ಮಂದಿ ನೋಂದಣಿ ಮಾಡಿದ್ದಾರೆ.2022ನೇ ಸಾಲಿನ ಬೆಳೆ ವಿಮೆಯ ಮೊತ್ತವನ್ನು ಡಿಸೆಂಬರ್‌ ಅಂತ್ಯದ ಒಳಗೆ ಪಾವತಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.