ADVERTISEMENT

ಬಿಡಿಎ ಅಕ್ರಮ: ಕೆಎಎಸ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 3 ಮೇ 2022, 15:46 IST
Last Updated 3 ಮೇ 2022, 15:46 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನುಗಳಲ್ಲಿದ್ದ ಕೊಳೆಗೇರಿ ನಿವಾಸಿಗಳ ಹೆಸರಿನಲ್ಲಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಆರೋಪದ ಮೇಲೆ ನಿವೃತ್ತ ಕೆಎಎಸ್‌ ಅಧಿಕಾರಿ ಎಚ್‌.ಆರ್‌. ಜಗದೀಶ್ ಹಾಗೂ ಕೆಎಎಸ್‌ ಅಧಿಕಾರಿ ರೂಪಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ ದಾಖಲಿಸಿದೆ.

ಜಗದೀಶ್‌ ಬಿಡಿಎ ಉಪ ಕಾರ್ಯದರ್ಶಿ–2ರ ಹುದ್ದೆಯಲ್ಲಿದ್ದರು. ರೂಪಾ ಬಿಡಿಎ ಉಪ ಕಾರ್ಯದರ್ಶಿ–3 ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಸ್ವಾಧೀನಪಡಿಸಿಕೊಂಡ ಕೊಳೆಗೇರಿ ನಿವಾಸಿಗಳಲ್ಲಿ ಹಲವರಿಗೆ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುವ ಆರೋಪ ಇವರ ಮೇಲಿದೆ.

2021ರ ನವೆಂಬರ್‌ 19ರಿಂದ 23ರವರೆಗೆ ಬಿಡಿಎ ಕಚೇರಿಗಳಲ್ಲಿ ಶೋಧ ನಡೆಸಿದ್ದ ಎಸಿಬಿ ಅಧಿಕಾರಿಗಳು, ನೂರಾರು ಕಡತಗಳನ್ನು ವಶಪಡಿಸಿಕೊಂಡಿದ್ದರು. ಅವುಗಳ ಪರಿಶೀಲನೆ ನಡೆಸಿದಾಗ ಕೊಳೆಗೇರಿ ನಿವಾಸಿಗಳಿಗೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆಯಲ್ಲೂ ಅಕ್ರಮ ನಡೆದಿರುವುದು ಕಂಡುಬಂದಿತ್ತು. ಈ ಸಂಬಂಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲು ಅನುಮತಿ ಕೋರಿ ಎಸಿಬಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ADVERTISEMENT

ಜಗದೀಶ್‌ ಮತ್ತು ರೂಪಾ ವಿರುದ್ಧ ತನಿಖೆಗೆ ಅನುಮತಿ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, 2022ರ ಏಪ್ರಿಲ್‌ 21 ಮತ್ತು 22ರಂದು ಆದೇಶ ಹೊರಡಿಸಿತ್ತು. ಏಪ್ರಿಲ್‌ 29ರಂದು ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.