ADVERTISEMENT

ಬಿ.ಇ ಶುಲ್ಕ ಶೇ 8 ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 19:50 IST
Last Updated 9 ಜುಲೈ 2018, 19:50 IST
   

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳದ ಬಗ್ಗೆ ಸರ್ಕಾರ ಹಾಗೂ ಕಾಲೇಜುಗಳ ನಡುವೆ ಅನೇಕ ದಿನಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟ ಕೊನೆಗೂ ಮುಕ್ತಾಯವಾಗಿದ್ದು, ಶೇ 8ರಷ್ಟೇ ಶುಲ್ಕ ಹೆಚ್ಚಳಕ್ಕೆ ಒಪ್ಪಿಸುವಲ್ಲಿ ಉನ್ನತ ಶಿಕ್ಷಣ ಇಲಾಖೆ ಸಫಲವಾಗಿದೆ.

ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಜೊತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವು ದಿನಗಳಿಂದ ಮಾತುಕತೆ ನಡೆಸುತ್ತಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಮಾತುಕತೆಯಲ್ಲಿ ಶೇ 10ರಷ್ಟು ಶುಲ್ಕ ಹೆಚ್ಚಿಸಬೇಕೆಂದು ಅವರು ತಿಳಿಸಿದ್ದರು.

ಆದರೆ,ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್, ‘ಶೇ 8ಕ್ಕಿಂತ ಶುಲ್ಕಹೆಚ್ಚಿಸುವಂತಿಲ್ಲ’ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು. ಜೊತೆಗೆ ‘ಸಮಿತಿ ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಶುಲ್ಕವನ್ನು ನಿಗದಿಮಾಡುವುದಾದರೆ ಮಾತ್ರ ಸರ್ಕಾರ ಶುಲ್ಕ ನಿಗದಿಯಲ್ಲಿ ಮಧ್ಯ ಪ್ರವೇಶಿಸಬಹುದು. ಇಲ್ಲದಿದ್ದರೆ ಸಮಿತಿಯ ನಿರ್ಧಾರವೇ ಅಂತಿಮ. ಶುಲ್ಕ ನಿಗದಿಗಾಗಿಯೇ ಸಮಿತಿಯನ್ನು ರಚಿಸಲಾಗಿದೆ. ಅದನ್ನು ಬಿಟ್ಟು, ಸರ್ಕಾರವೇ‌ ನಿರ್ಧರಿಸುವುದಾದರೆ ಸಮಿತಿ ರಚನೆಯ ಅಗತ್ಯವೇನು. ಸಮಿತಿಯ ನಿರ್ಧಾರದಲ್ಲಿ ಅಸಮಾಧಾನ ಇದ್ದರೆ, ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲಿ’ ಎಂದು ಕಟುವಾಗಿ ಹೇಳಿದ್ದರು.

ADVERTISEMENT

‘ಶುಲ್ಕ ನಿಯಂತ್ರಣ ಸಮಿತಿಯ ಶಿಫಾರಸ್ಸಿನ್ನು ಉನ್ನತ ಶಿಕ್ಷಣ ಇಲಾಖೆ ಹೆಚ್ಚು ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಶೇ8ಕ್ಕಿಂತ ಹೆಚ್ಚು ಶುಲ್ಕ ನಿಗದಿಗೆ ಒಪ್ಪುತ್ತಿಲ್ಲ. ನಾವು ಶೇ 30ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದೆವು. ಎರಡು ದಿನಗಳ ಹಿಂದೆ ಶೇ 10ರಷ್ಟು ಹೆಚ್ಚಿಸಿ ಎಂದೂ ಹೇಳಿದ್ದೆವು. ಆದರೆ, ಇಲಾಖೆ ಅಂತಿಮ ನಿರ್ಧಾರ ನೀಡದಿದ್ದರಿಂದ ಮಾತುಕತೆಗೇ ಸಮಯ ವ್ಯರ್ಥ ಮಾಡಬಾರದು ಎಂದು ಶೇ 8ರಷ್ಟು ಹೆಚ್ಚಳಕ್ಕೆ ಒಪ್ಪಿದೆವು’ ಎಂದು ಪಾಂಡುರಂಗ ಶೆಟ್ಟಿ ಹೇಳಿದರು.

‘ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಆಗಸ್ಟ್‌ 1ರಿಂದ ಕಾಲೇಜು ಆರಂಭಿಸಬೇಕು. 22 ದಿನದೊಳಗೆ ಎಲ್ಲಾ ಪ್ರಕ್ರಿಯೆ ನಡೆಸಬೇಕಿರುವುದರಿಂದ ಇನ್ನೂ ತಡಮಾಡುವುದು ಒಳ್ಳೆಯದಲ್ಲ ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ತಿಳಿಸಿದರು.

‘ಶುಲ್ಕ ಹೆಚ್ಚಳದ ಬಗ್ಗೆ ಸಮಾಲೋಚನೆ ನಡೆಯುತ್ತಿದ್ದರಿಂದ ಸೀಟು ಹಂಚಿಕೆಯ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ.ವೈದ್ಯಕೀಯ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ನಿಗದಿಯಾಗಿದ್ದರಿಂದ ಕೇವಲ ಅದರ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದೇವೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಈಗಾಗಲೇ ಸಾಕಷ್ಟು ಸಮಯವಾಗಿದೆ. ಆಯ್ಕೆ ದಾಖಲಿಸಲು (ಆಪ್ಷನ್ ಎಂಟ್ರಿ) ಹಾಗೂ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಲು ಹೆಚ್ಚು ಸಮಯಾವಕಾಶದ ಅಗತ್ಯವಿದೆ. ಶೀಘ್ರ ಶುಲ್ಕ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಸದ್ಯ, ಸರ್ಕಾರಿ ಅನುದಾನಿತ ಕಾಲೇಜುಗಳ 16,942 ಸೀಟುಗಳನಷ್ಟೇ ಹಂಚಿಕೆ ಮಾಡಲಾಗಿದೆ. ಬಾಕಿ ಸೀಟುಗಳ ಹಂಚಿಕೆ ಕುರಿತು ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕಚೇರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ’ ಎಂದು ತಿಳಿಸಿದರು.

* ಶುಲ್ಕ ಹೆಚ್ಚಳಕ್ಕೆ ಕಾಲೇಜುಗಳ ಆಡಳಿತ ಮಂಡಳಿಗಳು ಒಪ್ಪಿಕೊಂಡಿವೆ.ಶೀಘ್ರ ಸೀಟು ಹಂಚಿಕೆಯ ಪಟ್ಟಿ ಬಿಡುಗಡೆಯಾಗಲಿದೆ

–ರಾಜಕುಮಾರ ಖತ್ರಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.