ADVERTISEMENT

ಏ.15 ರಂದು ಶಿಕ್ಷಕ ಹುದ್ದೆ ಅವಕಾಶ ವಂಚಿತರ ಹೋರಾಟ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:05 IST
Last Updated 12 ಏಪ್ರಿಲ್ 2019, 20:05 IST

ಬೆಂಗಳೂರು: ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿರುವ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಪದವೀಧರರು ಇದೇ 15 ರಂದು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

10,611 ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ನೇಮಕಾತಿ ಅಧಿಸೂಚನೆಯೇ ಗೊಂದಲದಿಂದ ಕೂಡಿರುವುದರಿಂದ ರಾಜ್ಯದಲ್ಲಿ ಸಾವಿರಾರು ಬಿಇಡಿ ಪದವೀಧರರಿಗೆ ಅರ್ಜಿ ಹಾಕುವ ಅವಕಾಶವೇ ಇಲ್ಲವಾಗಿದೆ ಎಂದು ಅಭ್ಯರ್ಥಿಗಳ ಪ್ರತಿನಿಧಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಲೋಪವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅರ್ಜಿ ಸಲ್ಲಿಕೆಗೆ ಇದೇ 18 ಕೊನೆಯ ದಿನವಾಗಿದೆ. ಲೋಪ ಸರಿಪಡಿಸುವ ಲಕ್ಷಣ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

‘ನಾವು ಕಷ್ಟಪಟ್ಟು ಬಿಇಡಿ ತರಬೇತಿ ಮಾಡಿ, ಟಿಇಟಿಯಲ್ಲಿ ಅರ್ಹತೆ ಹೊಂದಿದ್ದರೂ ಸರ್ಕಾರಿ ಶಿಕ್ಷಕರಾಗಿ ನೇಮಕಗೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಲು ಪದವಿಯಲ್ಲಿ ಪಿಸಿಎಂ ಕಲಿತಿರಲೇಬೇಕು ಮತ್ತು ಐಚ್ಛಿಕ ವಿಷಯಗಳಲ್ಲಿ ಕನಿಷ್ಟ ಶೇ 50 ರಷ್ಟು ಅಂಕ ಪಡೆದಿರಲೇಬೇಕು. ಪಿಎಂಸಿಎಸ್‌, ಪಿಎಂಇ, ಸಿಬಿಝಡ್‌, ಪಿಎಂಎಸ್‌ ಮಾಡಿದವರಿಗೆ ಅವಕಾಶವಿಲ್ಲ. ಇದು ಅನ್ಯಾಯದಿಂದ ಕೂಡಿದ ನೀತಿ’ ಎಂದು ಅವರು ಹೇಳಿದ್ದಾರೆ.

ಕನ್ನಡ ಮತ್ತು ಸಮಾಜ ವಿಷಯದ ಶಿಕ್ಷಕರಾಗಲು ಪದವಿಯಲ್ಲಿ ಮನೋವಿಜ್ಞಾನ, ಶಿಕ್ಷಣಶಾಸ್ತ್ರ, ಗ್ರಾಮೀಣಾಭಿವೃದ್ಧಿ, ಸಮಾಜ ಶಾಸ್ತ್ರ ವಿಷಯ ಅಧ್ಯಯನ ಮಾಡಿದವರಿಗೆ ಅರ್ಜಿ ಹಾಕಲು ಅವಕಾಶವಿಲ್ಲ. ಅನ್ಯಾಯದಿಂದ ಕೂಡಿದ ಸಿ ಅಂಡ್‌ ಆರ್‌ ನಿಯಮ ಜಾರಿಗೊಳಿಸಿ ಬಡ ಮತ್ತು ಗ್ರಾಮೀಣ ಪ್ರದೇಶದ ಪದವೀಧರರನ್ನು ವಂಚಿಸಲಾಗಿದೆ. ಇದನ್ನು ಪ್ರತಿಭಟಿಸಿ ಏ. 15 ರ ಬೆಳಿಗ್ಗೆ 10 ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೆ ಈ ಹೋರಾಟ ನಡೆಸಲಾಗುತ್ತಿದೆ ಎಂದು ಗೋವಿಂದಪ್ಪ ತಿಳಿಸಿದ್ದಾರೆ. ವಿವರಗಳಿಗೆ 9164737395 ಸಂಪರ್ಕಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.