ADVERTISEMENT

ಬೆಳಗಾವಿ ಅಧಿವೇಶನಕ್ಕೆ ಸಿದ್ಧತೆ ಶುರುವಾಗಿದೆ: ಸ್ಪೀಕರ್‌ ರಮೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 9:01 IST
Last Updated 28 ನವೆಂಬರ್ 2018, 9:01 IST
ರಮೇಶ್‌ ಕುಮಾರ್‌
ರಮೇಶ್‌ ಕುಮಾರ್‌   

ಬೆಂಗಳೂರು: ‘ಬೆಳಗಾವಿ ಅಧಿವೇಶನಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ನಾನು ಅಧಿಕಾರಿಗಳ ಜೊತೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದೇನೆ’ ಎಂದು ಸ್ಪೀಕರ್‌ರಮೇಶ್‌ ಕುಮಾರ್‌ ಹೇಳಿದರು.

ಡಿಸೆಂಬರ್‌ 10ರಿಂದ ಪ್ರಾರಂಭವಾಗಲಿರುವ ಬೆಳಗಾವಿ ಅಧಿವೇಶನದ ಸಿದ್ಧತೆ ಕುರಿತು ಮಾತನಾಡಿದ ಅವರು, ‘ಕಳೆದ ಬಾರಿ ಅಧಿವೇಶನದ ವೇಳೆ ಊಟದ ಬಗ್ಗೆ ದೂರು ಬಂದಿತ್ತು. ಈ ಬಗ್ಗೆ ಎಚ್ಚರವಹಿಸಲು ಸೂಚಿಸಲಾಗಿದೆ.ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಭಾಗದ ಆಹಾರ ನೀಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಪ್ರತಿಭಟನೆ ಮಾಡಬೇಕೆಂದು ಯೋಜಿಸಿರುವವರಿಗೆ ಅಗತ್ಯ ಸ್ಥಳ ಮತ್ತು ಸೂಕ್ತ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ‌. ಎಲ್ಲಾ ಕೆಲಸಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ’ ಎಂದರು.

ADVERTISEMENT

‘ಶಾಸಕರು ಹಾಜರಾಗಬೇಕು ಅಂತ ಅಪೇಕ್ಷೆ ಮಾಡುತ್ತೇವೆ. ಆದರೆ, ಕಡ್ಡಾಯವಾಗಿ ಹಾಜರಾಗಬೇಕು ಎಂದು ಒತ್ತಡ ಹಾಕಲು ಸಾಧ್ಯವಿಲ್ಲ. ಅವರಿಗೆ ಎಲ್ಲಾ ಸೌಕರ್ಯಗಳನ್ನು ನೀಡಲಾಗುತ್ತಿದೆ. ಹೀಗಾಗಿ ರಾಜ್ಯದ, ಕ್ಷೇತ್ರದ ಹಿತದೃಷ್ಟಿಯಿಂದಶಾಸಕರು ಭಾಗವಹಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಇಷ್ಟಾದರೂ ಅಧಿವೇಶನಕ್ಕೆ ಬಾರದಿದ್ದರೆ, ಅದು ಜನರಿಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡದಂತೆ ಆಗುತ್ತದೆ’ ಎಂದು ಹೇಳಿದರು.

‘ಮೇಕೆದಾಟಿಗೆ ಅನುಮತಿ ಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಈ ಯೋಜನೆಯಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಅನೇಕ ಭಾಗಗಳಿಗೆ ಅನುಕೂಲವಾಗುತ್ತದೆ.ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿರುವ ವಿಚಾರನಮ್ಮ ಭಾಗದ ಜನರಿಗೆ ಸಮಾಧಾನ ತಂದಿದೆ. ತಮಿಳುನಾಡುಈ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿತ್ತು’ ಎಂದು ತಿಳಿಸಿದರು.

‘ಜಲಸಂಪನ್ಮೂಲ ಇಲಾಖೆ ಸಚಿವರು ಅತ್ಯಂತ ಕ್ರೀಯಾಶೀಲರಾಗಿದ್ದಾರೆ.ಆದಷ್ಟು ಬೇಗ ಡಿಪಿಆರ್ ಸಿದ್ದ ಮಾಡಿ ಕೇಂದ್ರಕ್ಕೆ ಸಲ್ಲಿಸಬೇಕಾಗಿದೆ. ಯೋಜನೆಗೆ ಶೀಘ್ರ ಚಾಲನೆ ಸಿಗಬೇಕು’ ಎಂದು ವಿಧಾನಸೌಧದಲ್ಲಿ ರಮೇಶ್ ಕುಮಾರ್‌ ಹೇಳಿಕೆ ನೀಡಿದರು.

ಅಧಿವೇಶನದಲ್ಲಿ ಹೋರಾಟ ಮಾಡ್ತೀವಿ:

‘ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದ ನಂತರ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಎಲ್ಲಾ ಅನುದಾನವನ್ನು ಕೇವಲ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳಿಗೆ ನೀಡುತ್ತಿದ್ದಾರೆ’ ಬಿಜೆಪಿ ಶಾಸಕ ಜಗದೀಶ್‌ ಶೆಟ್ಟರ್‌ ಆಕ್ರೋಶ ವ್ಯಕ್ತಪಡಿಸಿದರು.

‘ಇದುವರೆಗೆ ಐದೊ, ಹತ್ತೋಸಚಿವ ಸಂಪುಟ ಸಭೆಗಳು ನಡೆದಿದ್ದಾವೆ. ಎಲ್ಲಾ ಸಭೆಗಳಲ್ಲಿ ಹಾಸನ, ರಾಮನಗರ ಭಾಗಕ್ಕೆ ಸೀಮಿತವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ.ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಯಾರೇಇರಬಹುದು ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದ್ದಾರೆ’ ಎಂದರು.

‘ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಗಳನ್ನು ಪರಿಶೀಲಿಸಿದರೆ,ಹಾಸನ ಮತ್ತು ಹೊಳೆನರಸೀಪುರಕ್ಕೆ ಮಾತ್ರ ಯೋಜನೆಗಳು ಇರುವುದು ಗೊತ್ತಾಗುತ್ತದೆ. ಇದರ ಬಗ್ಗೆ ಉತ್ತರ ಕರ್ನಾಟಕದ ಜನರಿಗೂ ಬಹಳ ಕೋಪವಿದೆ. ಡಿಸೆಂಬರ್ 10ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.