ADVERTISEMENT

ಭಾರಿ ಮಳೆ, ಪ್ರವಾಹ; ನಲುಗಿದ ಬೆಳಗಾವಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:40 IST
Last Updated 7 ಆಗಸ್ಟ್ 2019, 5:40 IST
ಬೆಳಗಾವಿ ಬಳಿಯ ಬೆಳಗುಂದಿ ರಸ್ತೆಯ ಮೇಲೆ ಮಂಗಳವಾರ 2 ಅಡಿಯಷ್ಟು ನೀರು ಹರಿಯಿತು
ಬೆಳಗಾವಿ ಬಳಿಯ ಬೆಳಗುಂದಿ ರಸ್ತೆಯ ಮೇಲೆ ಮಂಗಳವಾರ 2 ಅಡಿಯಷ್ಟು ನೀರು ಹರಿಯಿತು   

ಬೆಳಗಾವಿ: ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ದಕ್ಷಿಣ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಬಹುತೇಕ ಪ್ರದೇಶಗಳು ನಲುಗಿಹೋಗಿವೆ. ನೂರಾರು ಮನೆಯೊಳಗೆ ನೀರು ನುಗ್ಗಿವೆ, ಸಾವಿರಾರು ಎಕರೆ ಹೊಲದಲ್ಲಿನ ಬೆಳೆ ನಾಶವಾಗಿದೆ. ಬಸ್‌, ರೈಲ್ವೆ ಸಂಪರ್ಕ ಕಡಿತಗೊಂಡಿದೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಕೃಷ್ಣಾ ಹಾಗೂ ಉಪನದಿಗಳ ಮೂಲಕ 2.94 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವವಿದ್ದು, ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತಲುಪಬೇಕೆಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಮನವಿ ಮಾಡಿಕೊಂಡಿದ್ದಾರೆ.

ಕೃಷ್ಣಾ, ದೂಧ್‌ಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ಸೇರಿದಂತೆ ವಿವಿಧ ನದಿಗಳ ತೀರದ ಹಳ್ಳಿಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುವ ಕೆಲಸ ಮುಂದುವರಿದಿದ್ದು, 1,400ಜನರನ್ನು ಸ್ಥಳಾಂತರಿಸಲಾಗಿದೆ. ಬೆಳಗಾವಿ ಬಳಿಯ ಕಾಕತಿ ಮೂಲಕ ಹಾದು ಹೋಗುವ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ವಾಹನಗಳ ಸಂಪರ್ಕ ಕಡಿತಗೊಂಡಿದೆ.

ADVERTISEMENT

ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಹಾಪುರ, ಸಾವಂತವಾಡಿ ಹಾಗೂ ಗೋವಾದ ಪಣಜಿ, ಬಿಚೋಲಿಂ ಕಡೆ ಸಂಪರ್ಕ ಕಡಿತಗೊಂಡಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಮಾರ್ಗದ ಎಲ್ಲ ಬಸ್‌ಗಳ ಪ್ರಯಾಣವನ್ನು ರದ್ದುಪಡಿಸಿದೆ. ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದ್ದು, ಎಂ.ಕೆ. ಹುಬ್ಬಳ್ಳಿ ಬಳಿಯ ಸೇತುವೆಯ ಮೇಲೆ ವಾಹನಗಳ ಸಂಚಾರವನ್ನು ಕಡಿತಗೊಳಿಸಲಾಗಿದೆ. ಅನಿವಾರ್ಯ ಇರುವವರೆಗೆ ಮಾತ್ರ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.

ಘಟಪ್ರಭಾ ಉಕ್ಕಿ ಹರಿಯುತ್ತಿದ್ದು, ಗೋಕಾಕ– ಸಂಕೇಶ್ವರ ಮಾರ್ಗದ ಲೊಳಸೂರ ಸೇತುವೆ ಮುಳುಗಡೆಯಾಗಿದೆ. ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ– ಕೆ.ಬಿ. ಪಟ್ಟಿಹಾಳ ಸಂಪರ್ಕ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದೆ.

ಮಲಪ್ರಭಾ ಉಗಮಸ್ಥಳವಾದ ಕಣಕುಂಬಿಯಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, 24 ಗಂಟೆಗಳಲ್ಲಿ 335 ಮಿ.ಮೀ ಭಾರಿ ಮಳೆಯಾಗಿದೆ. ಖಾನಾಪುರ ತಾಲ್ಲೂಕಿನಲ್ಲಿ 1,944 ಮಿ.ಮೀ ಮಳೆಯಾಗಿದೆ. ಖಾನಾಪುರ– ಹಳಿಯಾಳ ಸೇತುವೆ ಜಲಾವೃತವಾಗಿದೆ. ಅಕ್ಕಪಕ್ಕದ ನಗರಗಳ ಜೊತೆ ಖಾನಾಪುರ ಸಂಪರ್ಕ ಕಡಿತಗೊಂಡಿದೆ. ಬೆಳಗಾವಿಯಲ್ಲಿ 136 ಮಿ.ಮೀ ಮಳೆಯಾಗಿದ್ದು, ತಾಲ್ಲೂಕಿನಲ್ಲಿ 1,454 ಮಿ.ಮೀ ಮಳೆಯಾಗಿದೆ.

ಮನೆಗಳಿಗೆ ನುಗ್ಗಿದ ನೀರು:ಬೆಳಗಾವಿ, ಗೋಕಾಕ, ಕೊಣ್ಣೂರು, ಖಾನಾಪುರ, ಲೋಂಡಾದಲ್ಲಿ ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಹಿರೇಬಾಗೇವಾಡಿಯ ಸರ್ವೀಸ್‌ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ರಾಯಬಾಗ ತಾಲ್ಲೂಕಿನ ಬಾವನಸೌಂದತ್ತಿ ಪಿಕೆಪಿಎಸ್‌ ಸೊಸೈಟಿ ಜಲಾವೃತವಾಗಿದೆ. ಕಿತ್ತೂರಿನ ರಾಣಿ ಚನ್ನಮ್ಮನ ಕೋಟೆಯ ಗೋಡೆಯು ಒಂದೆಡೆ ಹಾನಿಗೊಳಗಾಗಿದೆ.

80,590 ಹೆಕ್ಟೇರ್‌ ಜಮೀನಿನಲ್ಲಿ ನೀರು ನುಗ್ಗಿದ್ದು, ಬೆಳೆ ನಾಶವಾಗಿದೆ. 1,048 ಕಿ.ಮೀ ರಸ್ತೆ ಹಾನಿಗೊಳಗಾಗಿದೆ. 140 ಸೇತುವೆಗಳು ಜಲಾವೃತವಾಗಿವೆ.

ಅಥಣಿ, ಚಿಕ್ಕೋಡಿ, ಖಾನಾಪುರ, ಗೋಕಾಕ, ರಾಯಬಾಗ, ಹುಕ್ಕೇರಿ, ಕಾಗವಾಡ, ಮೂಡಲಗಿ ತಾಲ್ಲೂಕಿನ 96 ಹಳ್ಳಿಗಳಲ್ಲಿ ನೀರು ನುಗ್ಗಿದೆ. 8,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. 23 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 1,400ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಪರಿಹಾರ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ವಿಕೋಪ ಪರಿಹಾರ ಪಡೆಯ 100 ಸಿಬ್ಬಂದಿ, ಸೇನೆಯ 150 ಯೋಧರು ಜಿಲ್ಲಾಡಳಿತದ ಜೊತೆ ಕೈಜೋಡಿಸಿದ್ದಾರೆ.

ರೈಲ್ವೆ ಬಂದ್‌:ಬೆಳಗಾವಿ– ಖಾನಾಪುರ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ, ರೈಲು ಹಳಿ ಹಾನಿಗೊಳಗಾಗಿದೆ. ಪಟ್ನಾ– ವಾಸ್ಕೊ, ಹುಬ್ಬಳ್ಳಿ– ವಾಸ್ಕೊ, ಹಜರತ್‌ ನಿಜಾಮುದ್ದೀನ್‌– ವಾಸ್ಕೋ ರೈಲುಗಳು ಬೆಳಗಾವಿ ನಿಲ್ದಾಣದಲ್ಲಿಯೇ ನಿಂತಿದ್ದು, ತಮ್ಮ ಮುಂದಿನ ಪ್ರಯಾಣವನ್ನು ರದ್ದುಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.