ADVERTISEMENT

ಸಣ್ಣಾಗಿಂದಾಗಲೂ ಸೈನಿಕನಾಗಬೇಕಂತ ಹುಚ್ಚು ಹಿಡಿಸಿಕೊಂಡಿದ್ದ: ಯೋಧ ರಾಹುಲ್ ತಂದೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 14:17 IST
Last Updated 8 ನವೆಂಬರ್ 2019, 14:17 IST
ರಾಹುಲ್‌ ಸುಳಗೇಕರ
ರಾಹುಲ್‌ ಸುಳಗೇಕರ   

ಬೆಳಗಾವಿ: ‘ಅಂವ ಸಣ್ಣಾಗಿಂದಾಗಲೂ ಸೈನಿಕನಾಗಬೇಕಂತ ಹುಚ್ಚು ಹಿಡಿಸಿಕೊಂಡಿದ್ದ. ನಾ ರಜೆ ಮೇಲೆ ಊರಿಗೆ ಬಂದಿದ್ದಾಗ, ಸೇನೆಯ ಬಗ್ಗೆಯೇ ಮಾತನಾಡುತ್ತಿದ್ದ. ಅದನ್ನೇ ಕೇಳುತ್ತಿದ್ದ. ಅಂವ ಅಂದುಕೊಂಡಂಗ ಸೇನೆಗೆ ಸೇರಿಕೊಂಡ, ದೇಶ ರಕ್ಷಣೆ ಮಾಡುವಾಗ ಜೀವಾನೂ ಬಿಟ್ಟಾ...’ ಎಂದು ತಮ್ಮ ಮಗ, ಹುತಾತ್ಮನಾದ ರಾಹುಲ್‌ನನ್ನು ನೆನೆದು ಮಾಜಿ ಯೋಧ ಭೈರು ಸುಳಗೇಕರ ಗದ್ಗದೀತರಾದರು.

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಗುರುವಾರ ನಸುಕಿನಜಾವ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ರಾಹುಲ್‌ ಹುತಾತ್ಮರಾದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ವಗ್ರಾಮವಾದ ಬೆಳಗಾವಿ ಸಮೀಪದ ಉಚಗಾಂವದಲ್ಲಿ ನೀರವ ಮೌನ ಆವರಿಸಿದೆ.

ದೇಶರಕ್ಷಣೆಯಲ್ಲಿ ತಮ್ಮ ಗ್ರಾಮದ ಯೋಧ ಹುತಾತ್ಮನಾಗಿರುವ ಅಭಿಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ, ರಸ್ತೆಗಳಲ್ಲಿ ಕಟೌಟ್‌, ಬ್ಯಾನರ್‌ ಹಾಕಿದ್ದಾರೆ. ‘ರಾಹುಲ್‌ ಅಮರ್‌ ರಹೇ’, ‘ರಾಹುಲ್‌ ನಮ್ಮ ಹೆಮ್ಮೆ’, ‘ಜೈ ಜವಾನ್‌ ಜೈ ಕಿಸಾನ್‌’ ಪ್ರೇರಕ ಘೋಷವಾಕ್ಯಗಳನ್ನು ಅದರಲ್ಲಿ ಬರೆಸಿದ್ದಾರೆ.

ADVERTISEMENT

ಸೈನಿಕರ ಕುಟುಂಬ:ಭೈರು ಅವರದ್ದು ಸೈನಿಕರ ಕುಟುಂಬ. ಅವರು ಹಲವು ವರ್ಷಗಳ ಕಾಲ ಸೇನೆಯಲ್ಲಿ ಕಾರ್ಯ ನಿರ್ವಹಿಸಿ, ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದಾರೆ. ಇವರ ಇಬ್ಬರೂ ಗಂಡು ಮಕ್ಕಳು ಸೇನೆಗೆ ಭರ್ತಿಯಾಗಿದ್ದರು. ಹಿರಿಯ ಪುತ್ರ ಮಯೂರ 10 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ, ಅವರು ಕೂಡ ಕಾಶ್ಮೀರದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ರಾಹುಲ್‌ 4 ವರ್ಷಗಳ ಹಿಂದೆಯಷ್ಟೇ ಸೇನೆಗೆ ಸೇರಿದ್ದರು.

‘ರಾಹುಲ್‌ಗೆ ಚಿಕ್ಕಂದಿನಿಂದಲೂ ಸೇನೆಯ ಬಗ್ಗೆ ಒಲವು ಇತ್ತು. ಹತ್ತನೇ ತರಗತಿ ಪಾಸಾದ ತಕ್ಷಣ ಸೇನೆಗೆ ಸೇರಿದ್ದ. ಆಗ 18 ವರ್ಷದವನಿರಬಹುದು. ಮೊನ್ನೆಯಷ್ಟೇ ಗಣೇಶ ಹಬ್ಬಕ್ಕೆ ಬಂದಿದ್ದ. 45 ದಿನಗಳ ಸುದೀರ್ಘ ರಜೆಯ ನಂತರ ವಾಪಸ್‌ ಕಾಶ್ಮೀರಕ್ಕೆ ಹೋಗಿದ್ದ. ಇನ್ನೆಂದೂ ಆತ ಮರಳಿ ಬರುವುದಿಲ್ಲ’ ಎಂದು ಭೈರು ನೆನೆದು ಭಾವುಕರಾದರು.

ರಾಹುಲ್‌ನ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿಯೇ ಮಾಡಲು ತೀರ್ಮಾನಿಸಲಾಗಿದೆ. ಶನಿವಾರ ಬೆಳಗಿನ ಜಾವ ಪ್ರಾರ್ಥಿವ ಶರೀರ ಗ್ರಾಮಕ್ಕೆ ಬರುವ ನಿರೀಕ್ಷೆಯಿದೆ ಎಂದು ಕುಟುಂಬಸ್ಥರು ತಿಳಿಸಿದರು.

ಪಾಕ್‌ ಪ್ರಚೋದಿತ ದಾಳಿಗೆ ಬಲಿ

ನವದೆಹಲಿ: ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಜಮ್ಮು ಹಾಗೂ ಕಾಶ್ಮೀರ ಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದ ಉಗ್ರರ ಜೊತೆ ವೀರಾವೇಶದಿಂದ ಹೋರಾಡಿದ ಬೆಳಗಾವಿ ಸಮೀಪದ ಉಚಗಾಂವದ ಯೋಧ ರಾಹುಲ್‌ ಭೈರು ಸುಳಗೇಕರ (21) ಹುತಾತ್ಮರಾದರು.

ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ, ಗುರುವಾರ ನಸುಕಿನ ಜಾವ 2.30ರ ವೇಳೆಗೆ ಯದ್ವಾತದ್ವಾ ಗುಂಡಿನ ಮಳೆ ಸುರಿಯುತ್ತಿದ್ದರು. ಗುಂಡಿನ ಮಳೆಯ ಆಶ್ರಯ ಪಡೆದ ಉಗ್ರರು ಕಾಶ್ಮೀರದೊಳಗೆ ನುಗ್ಗಲು ಪ್ರಯತ್ನಿಸುತ್ತಿದ್ದರು. ಆ ವೇಳೆ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರೂ ಪ್ರತಿದಾಳಿ ನಡೆಸಿ, ಪ್ರತ್ಯುತ್ತರ ನೀಡಿದರು. ಉಗ್ರರನ್ನು ಹಿಮ್ಮೆಟ್ಟಿಸಿದರು. ಈ ವೇಳೆ ಉಗ್ರರ ಗುಂಡು ತಗುಲಿ ರಾಹುಲ್‌ ತೀವ್ರವಾಗಿ ಗಾಯಗೊಂಡರು. ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ ರಾಹುಲ್‌ ಹುತಾತ್ಮರಾದರು.

‘ಪಾಕಿಸ್ತಾನ ಸೈನ್ಯ ಕದನ ವಿರಾಮ ನಿಯಮವನ್ನು ಉಲ್ಲಂಘಿಸಿದೆ. ಪೂಂಚ್‌ ಜಿಲ್ಲೆಯ ಕೃಷ್ಣಾ ಘಾಟಿ ಪ್ರದೇಶದಲ್ಲಿ ಉಗ್ರರು ನುಸುಳುವುದಕ್ಕೆ ಸಹಕರಿಸಲು ಯದ್ವಾತದ್ವಾ ಗುಂಡಿನ ಮಳೆಗೈದಿದ್ದರು’ ಎಂದು ರಕ್ಷಣಾ ಇಲಾಖೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಹುಲ್‌ ಅತ್ಯಂತ ಧೈರ್ಯದಿಂದ ಹೋರಾಡಿದರು. ಅವರೊಬ್ಬ ವೀರ ಯೋಧನಾಗಿದ್ದ. ಅವರ ತ್ಯಾಗ ಹಾಗೂ ಬಲಿದಾನಕ್ಕೆ ಇಡೀ ದೇಶ ಋಣಿಯಾಗಿರುತ್ತದೆ’ ಎಂದು ವಕ್ತಾರರು ಕಂಬನಿ ಸುರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.