ADVERTISEMENT

ಅಧಿವೇಶನ ನೆಪ: ಲೆಕ್ಕಕ್ಕೇ ಸಿಗದ ₹20 ಕೋಟಿ

ಸೊಳ್ಳೆ ಪರದೆ, ಬಿದಿರಿನ ತಟ್ಟಿ, ಶೌಚಾಲಯಗಳ ಹೆಸರಿನಲ್ಲಿ ಕರಗಿದ ಹಣ

ಮಂಜುನಾಥ್ ಹೆಬ್ಬಾರ್‌
Published 21 ನವೆಂಬರ್ 2018, 20:30 IST
Last Updated 21 ನವೆಂಬರ್ 2018, 20:30 IST
ಸುವರ್ಣ ಸೌಧ
ಸುವರ್ಣ ಸೌಧ   

ಬೆಂಗಳೂರು: ಬೆಳಗಾವಿ ಅಧಿವೇಶನದ ವೇಳೆ ಶೌಚಾಲಯ, ಸೊಳ್ಳೆ ಪರದೆ, ಬಿದಿರಿನ ತಟ್ಟಿ ಸೌಲಭ್ಯ ಒದಗಿಸಲು, ಊಟದ ಹೆಸರಿನಲ್ಲಿ ಸುಳ್ಳು ಬಿಲ್‌ ಸೃಷ್ಟಿಸಿ ಅವ್ಯವಹಾರ ನಡೆಸಿರುವುದು ಪತ್ತೆಯಾಗಿದೆ.

2016 ಹಾಗೂ 2017ರಲ್ಲಿ ನಡೆದ ಅಧಿವೇಶನದ ವೇಳೆ ಇಂತಹ ಖರ್ಚು ಮಾಡಲಾಗಿದೆ ಎಂದು ಬೋಗಸ್‌ ಲೆಕ್ಕ ನೀಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ.

ತಾತ್ಕಾಲಿಕ ಹಾಗೂ ಕೆಮಿಕಲ್‌ ಶೌಚಾಲಯದ ಹೆಸರಿನಲ್ಲಿ ಸುಳ್ಳು ಬಿಲ್‌ ಸೃಷ್ಟಿಸಿ ₹2.42 ಕೋಟಿ ಪಾವತಿ ಮಾಡಲಾಗಿದೆ. ಸುವರ್ಣ ವಿಧಾನಸೌಧ ಸುತ್ತಮುತ್ತ ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ, ಹೋರಾಟಗಾರರು ಹಾಗೂ ಪೊಲೀಸರಿಗೆ ಅನುಕೂಲವಾಗಲು ಎರಡು ವರ್ಷ ಸಂಚಾರಿ ಶೌಚಾಲಯ ಸೌಲಭ್ಯ ನೀಡಲಾಗಿತ್ತು ಎಂದು ಬೆಳಗಾವಿ ಮಹಾನಗರ ‍ಪಾಲಿಕೆ ಪತ್ರ ನೀಡಿದೆ. ಯಾವ ಇಲಾಖೆಯಿಂದಲೂ ಬೇಡಿಕೆ ಬರದಿದ್ದರೂ, ಶೌಚಾಲಯ ನಿರ್ಮಿಸಲಾಗಿದೆ ಎಂದು ಸುಳ್ಳು ಬಿಲ್‌ಗಳನ್ನು ಸೃಷ್ಟಿಸಲಾಗಿದೆ.

ADVERTISEMENT

ಈ ವೇಳೆ ಕೆ.ಬಿ.ಕೋಳಿವಾಡ ವಿಧಾನಸಭಾ ಅಧ್ಯಕ್ಷ ಹಾಗೂ ಎಸ್‌.ಮೂರ್ತಿ ಕಾರ್ಯದರ್ಶಿ ಆಗಿದ್ದರು.

ಪೊಲೀಸ್‌ ಸಿಬ್ಬಂದಿಗೆ ನೀಡಲಾಗಿದ್ದ ಕಲ್ಯಾಣ ಮಂಟಪದ ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಸಬೇಕು ಎಂದು ಬೆಳಗಾವಿ ಪೊಲೀಸ್‌ ಕಮಿಷನರ್‌ ಮನವಿ ಮಾಡಿದ್ದರು. ಅವಶ್ಯ ಇದೆ ಎಂಬ ನೆಪವೊಡ್ಡಿ ಪ್ರತಿಭಟನೆ ಮಾಡುವ ಸ್ಥಳಗಳಲ್ಲಿ (ಕೊಂಡಸ್‌ ಕೊಪ್ಪ, ಸುವರ್ಣ ಗಾರ್ಡನ್‌) ನೆಟ್‌ ಮ್ಯಾಟ್ ಹಾಸಲಾಗಿದೆ ಎಂದು ನಮೂದಿಸಲಾಗಿದೆ. ‘ಈ ಕುರಿತು ತಾಂತ್ರಿಕ ವರದಿ ಪಡೆದಿಲ್ಲ, ತಾಂತ್ರಿಕ ಪರಿಣಿತರು ಪರಿಶೀಲಿಸಿಲ್ಲ, ಅನಗತ್ಯ ಖರ್ಚು ಮಾಡಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

ಶೀಟ್‌, ಶಾಮಿಯಾನ, ಬ್ಯಾರಿಕೇಡ್‌, ಪೆಂಡಾಲ್‌, ಇನ್ನಿತರ ಸಾಮಗ್ರಿಗಳನ್ನು ಹಾಕಲು ಎರಡು ವರ್ಷ ₹10.44 ಕೋಟಿ ವೆಚ್ಚ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆಯಿಂದ ತಾಂತ್ರಿಕ ಅಂದಾಜು ಪಡೆದಿಲ್ಲ. ಕಾಮಗಾರಿ ಮುಗಿದ ನಂತರ ದೃಢೀಕರಣ ಪಡೆದಿಲ್ಲ .

ನಾಲ್ಕೇ ದಿನಗಳಲ್ಲಿ ಸುಣ್ಣ ಬಣ್ಣ!

2016ರಲ್ಲಿ ಸುವರ್ಣ ವಿಧಾನಸೌಧದ ಕಟ್ಟಡಕ್ಕೆ ಸುಣ್ಣ–ಬಣ್ಣ ಕಾಮಗಾರಿ ನಡೆಸಲಾಗಿತ್ತು ಎಂದು ಹೇಳಿ ₹2.48 ಕೋಟಿ ಭರಿಸಲಾಗಿತ್ತು. ಈ ಸಂಬಂಧ ಆ ವರ್ಷದ ನವೆಂಬರ್‌ 16ರಂದು ಕಾರ್ಯಾದೇಶ ನೀಡಲಾಗಿತ್ತು. ನವೆಂಬರ್‌ 21ರಿಂದ ಅಧಿವೇಶನ ಪ್ರಾರಂಭವಾಗಿತ್ತು. ನಾಲ್ಕು ದಿನಗಳಲ್ಲಿ ಇಡೀ ಕಟ್ಟಡಕ್ಕೆ ಸುಣ್ಣ ಬಣ್ಣ ಹಾಕಿಸುವುದು ಅಸಾಧ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾರಿಡಾರ್‌ಗಳಲ್ಲಿ ಬಿದಿರಿನ ತಟ್ಟಿ ಅಳವಡಿಕೆಗೆ ₹79.38 ಲಕ್ಷ ಭರಿಸಲಾಗಿತ್ತು. ತಟಸ್ಥ ಸಂಸ್ಥೆಯಿಂದ (ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌) ಪರಿಶೀಲನೆ ನಡೆಸದೆ ಹಣ ಪಾವತಿಸಲಾಗಿದೆ. ಬಿದಿರಿನ ತಟ್ಟಿಗಳನ್ನು ದುರಸ್ತಿ ಮಾಡಲಾಗಿದೆಯೇ ಅಥವಾ ಹೊಸದಾಗಿ ಖರೀದಿಸಲಾಗಿದೆಯೇ ಎಂಬುದರ ಮಾಹಿತಿ ಇಲ್ಲ. ಒಂದು ವೇಳೆ ತಟ್ಟಿಗಳನ್ನು ದುರಸ್ತಿ ಮಾಡಿಸಿದ್ದರೆ ಇಷ್ಟೊಂದು ದುಬಾರಿ ವೆಚ್ಚ ಆಗಿರುವುದು ಅನುಮಾನ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.