ADVERTISEMENT

ಬೇಲೇಕೇರಿ: ₹12 ಕೋಟಿ ಆಸ್ತಿ ಮುಟ್ಟುಗೋಲು ಹಾಕೊಕೊಂಡ ಜಾರಿ ನಿರ್ದೇಶನಾಲಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 1:17 IST
Last Updated 18 ಅಕ್ಟೋಬರ್ 2025, 1:17 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ಬೆಂಗಳೂರು: ಲೋಕಾಯುಕ್ತ ತನಿಖಾ ತಂಡವು ಬೇಲೇಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿದ್ದ ಕಬ್ಬಿಣದ ಅದಿರನ್ನು ಕದ್ದು, ರಫ್ತು ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ₹12.48 ಕೋಟಿ ಮೌಲ್ಯದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್‌ ಅವರೂ ಭಾಗಿಯಾಗಿರುವ ಈ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ದೆಹಲಿ ಮತ್ತು ಹರ್ಯಾಣದ ಗುರುಗ್ರಾಮದ ಹಲವು ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ತನಿಖೆ ಆರಂಭಿಸಿದೆ.

ಗಣಿಗಾರಿಕೆ ನಡೆಸುವವರು, ಅದಿರು ಸಾಗಿಸುವವರು, ಬಂದರು ಕಂಪನಿಗಳು, ಹಡಗು ಕಂಪನಿಗಳು ಮತ್ತು ರಫ್ತುದಾರರು ಸೇರಿ ದೊಡ್ಡ ಜಾಲವೊಂದನ್ನು ರೂಪಿಸಿಕೊಂಡು ಅದಿರು ಕಳ್ಳಸಾಗಣೆ ನಡೆಸಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ದೆಹಲಿ ಮತ್ತು ಗುರುಗ್ರಾಮದ ವಿಳಾಸಗಳಲ್ಲಿ ಹಲವು ಕಂಪನಿಗಳನ್ನು ಸ್ಥಾಪಿಸಿ, ಹಣಕಾಸು ವ್ಯವಹಾರ ನಡೆಸಲಾಗಿದೆ ಎಂದು ಇ.ಡಿ ತಿಳಿಸಿದೆ.

ADVERTISEMENT

ಈ ಅದಿರಿನ ರಫ್ತಿನಿಂದ ಬಂದ ಹಣದ ವರ್ಗಾವಣೆ ಜಾಲವನ್ನು ಪತ್ತೆ ಮಾಡಲಾಗಿದೆ. ಎಂಎಸ್‌ಪಿಎಲ್‌ ಲಿಮಿಟೆಡ್‌, ಗ್ರೀನ್‌ಟೆಕ್ಸ್ಟ್‌ ಮೈನಿಂಗ್‌ ಇಂಡಸ್ಟ್ರೀಸ್‌, ಶ್ರೀನಿವಾಸ ಮಿನರಲ್ಸ್‌ ಟ್ರೇಡಿಂಗ್‌ ಕಂಪನಿ, ಅರ್ಶದ್‌ ಎಕ್ಸ್‌ಫೋರ್ಟ್ಸ್‌, ಎಸ್‌ವಿಎಂ ನೆಟ್‌ ಪ್ರಾಜೆಕ್ಟ್‌ ಸಲ್ಯೂಷನ್ಸ್‌ ಲಿಮಿಟೆಡ್‌, ಆಲ್ಫೈನ್‌ ಮಿನ–ಮೆಟಲ್ಸ್‌ ಇಂಡಿಯಾ ಲಿಮಿಟೆಡ್‌ಗಳಿಗೆ ಈ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಆ ಹಣದಿಂದ ಖರೀದಿಸಲಾದ ₹12.48 ಕೋಟಿ ಮೌಲ್ಯದಷ್ಟು ಸ್ಥಿರಾಸ್ತಿಗಳನ್ನು ಈಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ. 

ತನಿಖೆಯ ಭಾಗವಾಗಿ ಬೆಂಗಳೂರು, ಹೊಸಪೇಟೆ, ದೆಹಲಿ ಮತ್ತು ಗುರುಗ್ರಾಮದ ಹಲವೆಡೆ ಇದೇ 15ರಂದು ಇ.ಡಿ ದಾಳಿ ನಡೆಸಿತ್ತು. ಈ ವೇಳೆ ದಾಖಲೆಗಳು, ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ಗಳು ಮತ್ತು ₹42 ಲಕ್ಷ ನಗದನ್ನು ವಶಕ್ಕೆ ಪಡೆದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.