ADVERTISEMENT

ನೀರಿನ ಶುದ್ಧೀಕರಣ ಘಟಕ ಸ್ಥಾಪನೆಗೆ ವಿಫಲವಾದರೆ ಕಠಿಣ ಕ್ರಮ: ಎನ್‌ಜಿಟಿ

ಅಧಿಕಾರಿಗಳಿಂದ ಪರಿಹಾರ ಮೊತ್ತಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:51 IST
Last Updated 19 ಡಿಸೆಂಬರ್ 2019, 19:51 IST
cc
cc   

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು, ಅಗರ ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಹಿನ್ನೆಲೆಯಲ್ಲಿ 2020ರ ಸೆಪ್ಟೆಂಬರ್‌ 30ರೊಳಗೆ ಕೊಳಚೆ ನೀರಿನ ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸದಿದ್ದರೆ ಅಧಿಕಾರಿಗಳಿಂದಲೇ ಪರಿಹಾರ ಮೊತ್ತ ಪಡೆಯಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹೇಳಿದೆ.

ಕೆರೆಗಳ ಅವ್ಯವಸ್ಥೆ ಆಧರಿಸಿ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 11ರಂದು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಪೀಠ ಈ ಆದೇಶ ನೀಡಿದೆ.

ಕೊನೆಯದಾಗಿ ನೀಡಲಾದ ಈ ಗಡುವಿನೊಳಗೆ ಎಸ್‌ಟಿಪಿ ಸ್ಥಾಪಿಸದಿದ್ದರೆ ಅಧಿಕಾರಿಗಳು ಪ್ರತಿ ಎಸ್‌ಟಿಪಿಗೆ ಮಾಸಿಕ ₹ 10 ಲಕ್ಷ ಪರಿಹಾರ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ADVERTISEMENT

ಅಲ್ಲದೆ, 2020ರ ಫೆಬ್ರುವರಿ 1ರ ನಂತರ ಕೆರೆಗಳಿಗೆ ಒಳಚರಂಡಿ ನೀರನ್ನು ಹರಿಬಿಡುವ ಖಾಸಗಿ ಬಿಲ್ಡರ್‌ಗಳಿಂದ ಮಾಸಿಕ ₹ 5 ಲಕ್ಷ ಪರಿಹಾರ ಸ್ವೀಕರಿಸಬೇಕು ಎಂದಿರುವ ಪೀಠ, ಒಳಚರಂಡಿಯ ನೀರು ಕೆರೆಗಳಿಗೆ ಸೇರುತ್ತಿಲ್ಲ ಎಂಬುದನ್ನು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾಲಮಿತಿಯೊಳಗೆ ದೃಢಪಡಿಸಬೇಕು ಎಂದು ಹೇಳಿದೆ.

ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ನೇತೃತ್ವದ ಮೇಲುಸ್ತುವಾರಿ ಸಮಿತಿಯ ಅವಧಿಯನ್ನು 2020ರ ಮಾರ್ಚ್‌ 24ರವರೆಗೆ ವಿಸ್ತರಿಸಿರುವ ಹಸಿರು ಪೀಠ, ಕೆರೆಗಳ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಸಮಿತಿಯು ಮಾರ್ಚ್‌ 6ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರವು ಪರಿಹಾರದ ರೂಪದಲ್ಲಿ ₹ 50 ಕೋಟಿ ಹಾಗೂ ಕಾರ್ಯಕ್ಷಮತೆ ಖಾತರಿಯಾಗಿ ₹ 100 ಕೋಟಿ ನೀಡಬೇಕು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ₹ 25 ಕೋಟಿ ದಂಡ ನೀಡಬೇಕು ಎಂದು ಸೂಚಿಸಿರುವ ಪೀಠವು, ನಿತ್ಯವೂ ಅಂದಾಜು 256.7 ದಶಲಕ್ಷ ಲೀಟರ್‌ ಕೊಳಚೆ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತಿದ್ದು, ಇದರ ತಡೆಗೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಎನ್‌ಜಿಟಿ ಆದೇಶದ ಮುಖ್ಯಾಂಶ
* ಬೆಂಗಳೂರಿನ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು
* ಕೆರೆಯ ಮಾಲಿನ್ಯ ತಡೆಯದ ಅಧಿಕಾರಿಗಳ ವಿರುದ್ಧ ಕ್ರಮ
* ಎಸ್‌ಟಿಪಿ ಸ್ಥಾಪಿಸದ ಅಪಾರ್ಟ್‌ಮೆಂಟ್‌ಗಳಿಂದ ಪರಿಹಾರ
* ಕೆರೆಗಳಿಗೆ ಕೊಳಚೆ ನೀರು ಸೇರದಂತೆ ಅಗತ್ಯ ಕ್ರಮ
* ನೀರಿನ ಗುಣಮಟ್ಟ ಅಳೆಯುವ ವ್ಯವಸ್ಥೆ ಜಾರಿಗೊಳಿಸಿ
* ಕೆರೆಗಳ ಹೂಳು, ಕೆಸರು ಮತ್ತು ಕಳೆ ತೆರವುಗೊಳಿಸಬೇಕು
* ಕೆರೆಯ ಬಳಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸಬೇಕು
* ನಿರ್ಮಾಣ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.